“ನೆನಪಿರಲಿ’ ಪ್ರೇಮ್ “ಚೌಕ’ ಬಳಿಕ ಕೇಳಿದ ಕಥೆಗಳೆಷ್ಟು ಗೊತ್ತಾ? ಬರೋಬ್ಬರಿ 23 ಕಥೆಗಳು! ಹೌದು, “ಚೌಕ’ ರಿಲೀಸ್ ಆಗಿದ್ದೇ ತಡ, ಪ್ರೇಮ್ ಅವರನ್ನು ಹುಡುಕಿ ಬಂದ ಕಥೆಗಳಿಗೆ ಬರವಿಲ್ಲ. ಆದರೆ, ಪ್ರೇಮ್ ಮಾತ್ರ ಯಾವ ಕಥೆಗಳನ್ನೂ ಓಕೆ ಅಂದಿಲ್ಲ. ಅದಕ್ಕೆ ಕಾರಣ, ಅವರಿಗೆ ಇಷ್ಟವಾಗದ ಕಥೆ ಮತ್ತು ಪಾತ್ರ. ಹಾಗಂತ ಅವರು ಸುಮ್ಮನೆ ಕೂತಿಲ್ಲ. ಒಂದಷ್ಟು ಕಥೆಗಳನ್ನು ಕೇಳುತ್ತಲೇ ಇದ್ದಾರೆ. ಇಷ್ಟರಲ್ಲೇ ಒಂದು ಸುದ್ದಿಯನ್ನೂ ಕೊಡುವ ಮುನ್ಸೂಚನೆ ಕೊಡುತ್ತಾರೆ.
ಅಂದಹಾಗೆ, ಪ್ರೇಮ್‌ಗೆ ಇಂದು ಹುಟ್ಟುಹಬ್ಬ. ರಾಜ್ಯದ ನಾನಾ ಕಡೆಯಿಂದ ಪ್ರೇಮ್ ಅಭಿಮಾನಿಗಳು ಶುಭಕೋರಲು ಆಗಮಿಸುತ್ತಿದ್ದಾರೆ. ಹಾಗಾಗಿ ಪ್ರೇಮ್, ಏ.18 (ಇಂದು) ಮಾತ್ರ ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಲ್ಲ. ಕಾರಣ, ಹುಟ್ಟುಹಬ್ಬದ ಶುಭಾಶಯ ಹೇಳಲು ದೂರದ ಊರುಗಳಿಂದೆಲ್ಲಾ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮನೆಯಲ್ಲೇ ಅವರ ಜತೆ ಕೇಕ್ ಕತ್ತರಿಸಿ ಸಂಭ್ರಮಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಹಾಗಾದರೆ, ಬರ್ತ್‌ಡೇ ದಿನ ಏನೂ ಸ್ಪೆಷಲ್ ಇಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಪ್ರೇಮ್, “ನನ್ನ ಅಭಿನಯದ “ದಳಪತಿ’ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ. ಅದೂ ನನ್ನ ಬರ್ತ್‌ಡೇ ದಿನದಂದೇ ಚಿತ್ರದ ಮೋಷನ್ ಪೊಸ್ಟರ್ ರಿಲೀಸ್ ಆಗುತ್ತಿರುವುದು ಖುಷಿಕೊಟ್ಟಿದೆ. ಅಂದು ವಿಶೇಷವಾಗಿ ಏನೂ ಇರೋದಿಲ್ಲ. ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ, ಫ್ಯಾಮಿಲಿ ಮತ್ತು ಅಭಿಮಾನಿಗಳ ಜತೆ ಸಂಭ್ರಮಿಸುತ್ತೇನೆ’ ಎಂದಷ್ಟೇ ಹೇಳುತ್ತಾರೆ ಪ್ರೇಮ್.
“ಚೌಕ’ ನಂತರ ಮುಂದೇನು ಎಂಬ ಪ್ರಶ್ನೆಗೆ, “ಸದ್ಯಕ್ಕೆ ಒಂದಷ್ಟು ಚಿತ್ರಗಳ ಕುರಿತು ಮಾತುಕತೆ ನಡೆಯುತ್ತಿದೆ. ಇನ್ನು ಯಾವುದೂ ಅಂತಿಮವಾಗಿಲ್ಲ. ಇಷ್ಟರಲ್ಲೇ ಸುದ್ದಿ ಕೊಡುತ್ತೇನೆ. “ಚೌಕ’ ಚಿತ್ರದ ಸಕ್ಸಸ್ ಬಳಿಕ ಜವಾಬ್ದಾರಿ ಜಾಸ್ತಿಯಾಗಿದೆ. ಒಳ್ಳೆಯ ಕಥೆ, ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. ನನ್ನದೇ ಬ್ಯಾನರ್‌ನಲ್ಲೊಂದು ಸಿನಿಮಾ ನಿರ್ಮಾಣ ಮಾಡುವ ಆಸೆಯೂ ಇದೆ. ಅದಕ್ಕಾಗಿ ಕಥೆಗಳ ಹುಡುಕಾಟ ನಡೆದಿದೆ.
ಒಳ್ಳೇ ಕಥೆ, ಒಳ್ಳೆಯ ತಂತ್ರಜ್ಞರನ್ನೊಳಗೊಂಡ ತಂಡ ಕಟ್ಟಿಕೊಂಡು ಸಿನಿಮಾ ಮಾಡುತ್ತೇನೆ. ಈಗ 23 ಸಿನಿಮಾಗಳಾಗಿವೆ. ದೇವರ ದಯೆ ಇದ್ದರೆ 25ನೇ ಸಿನಿಮಾ ನನ್ನ ಬ್ಯಾನರ್‌ನಲ್ಲೇ ಆಗಬಹುದು. ಸದ್ಯಕ್ಕೆ ನಾನು “ದಳಪತಿ’ ಮೇಲೆ ವಿಶ್ವಾಸವಿಟ್ಟುಕೊಂಡಿದ್ದೇನೆ. ಮೊದಲ ಸಲ ಪ್ರಶಾಂತ್‌ರಾಜ್ ಕಾಂಬಿನೇಷನ್‌ನಲ್ಲಿ ಕೆಲಸ ಮಾಡಿದ್ದೇನೆ. ಅದೊಂದು ಕ್ಲಾಸ್ ಮತ್ತು ಮಾಸ್ ಸಿನಿಮಾ. ಜನರಿಗೆ ಒಂದು ಹೊಸತನದ ಸಿನಿಮಾ ಅದಾಗಲಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಪ್ರೇಮ್.