Advertisement

ಬಾಲಕನಿಗೆ ಮರುಜನ್ಮ ಕೊಟ್ಟ ಹೃದಯ ಕಸಿ

12:38 PM Sep 06, 2018 | Team Udayavani |

ಬೆಂಗಳೂರು: ತೀವ್ರ ಹೃದ್ರೋಗ ಸಮಸ್ಯೆಯಿಂದ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ 13 ವರ್ಷದ ಬಾಲಕನಿಗೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಇತ್ತೀಚೆಗೆ ಯಶಸ್ವಿಯಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಿ
ಮರುಜನ್ಮ ನೀಡಿದೆ.  ಹೃದಯದ ಸ್ನಾಯು ದುರ್ಬಲಗೊಂಡು ರಕ್ತವನ್ನು ಪಂಪ್‌ ಮಾಡುವ ಸಾಮರ್ಥ್ಯ ಕ್ಷೀಣವಾಗುವ ಸ್ಥಿತಿ (ಡೈಲೇಟೆಡ್‌ ಕಾರ್ಡಿಯೋಮಯೋಪಥಿ)ಯಿಂದ ಬಳಲುತ್ತಿದ್ದ ಮಾ.ಕುಶಾಲ್‌ನ ಕಾಯಿಲೆಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯೊಂದೆ ಮಾರ್ಗವಾಗಿತ್ತು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಪಘಾತ ವೊಂದರಲ್ಲಿ ಸಾವಿಗೀಡಾದ ಯುವಕನ ಹೃದಯ ವನ್ನು ಚೆನ್ನೈ ಫೋರ್ಟಿಸ್‌ ಮಲರ್‌ ಆಸ್ಪತ್ರೆಯ ಮುಖ್ಯ ಹೃದಯ ಮತ್ತು ಕಸಿ ಶಸ್ತ್ರಚಿಕಿತ್ಸಾ ತಜ್ಞ, ಡಾ. ಕೆ.ಆರ್‌. ಬಾಲಕೃಷ್ಣನ್‌ ತಂಡದ ಸಹಯೋಗದಲ್ಲಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನ ವಿಭಾಗದ ಅಧ್ಯಕ್ಷ ಮತ್ತು ಶಸ್ತ್ರಚಿಕಿತ್ಸಾ ತಜ್ಞ ಡಾ. ವಿವೇಕ್‌ ಜವಳಿ ಅವರ ತಂಡ ಸಂಗ್ರಹಿಸಿ ಬೆಂಗಳೂರಿಗೆ ತಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

Advertisement

ಮಂಗಳವಾರ ನಗರದ ಹೋಟೆಲೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಾ. ವಿವೇಕ್‌ ಜವಳಿ ಅವರು, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಡೆಸಿದ ಮೊದಲ ಕ್ಲಿಷ್ಟಕರ ಮಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆ ಇದಾಗಿದೆ. ಹಲವು ಸವಾಲುಗಳ ನಡುವೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದೆ. ವಿಶಾಖಪಟ್ಟಣದಲ್ಲಿನ ವೈದ್ಯರು ಮತ್ತು ನಮ್ಮ ಎಲ್ಲ ಸಿಬ್ಬಂದಿಯ ಸಾಂಘಿಕ ಸಹಕಾರದ ಫಲ ಈ ಯಶಸ್ವಿ ಬದಲಿ ಹೃದಯ ಜೋಡಣೆ ಎಂದರು.

ಅಂತಾರಾಜ್ಯ ಸಮನ್ವಯ ಮತ್ತು ಕ್ಷಿಪ್ರಗತಿ ಕಾರ್ಯ ನಿರ್ವಹಣೆಯಿಂದ ಹೃದಯ ವೈಫಲ್ಯದ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಕಾಲಮಿತಿಯೊಳಗೆ ಕೈಗೊಳ್ಳಲು ಸಾಧ್ಯವಾಯಿತು. ಆರು ಗಂಟೆಗಳ ನಂತರ ಬಾಲಕ ವೆಂಟಿಲೇಟರ್‌ನಿಂದ ಹೊರಬಂದು ಚೇತರಿಸಿಕೊಂಡಿದ್ದಾನೆ.

ಅಂಗದಾನಿಗಳ ಕೊರತೆ: ನಮ್ಮ ದೇಶ ಅಂಗದಾನಿಗಳ ತೀವ್ರ ಕೊರತೆ ಅನುಭವಿಸುತ್ತಿದೆ. ಇದಕ್ಕೆ ಸ್ಪಷ್ಟ ಕಾರಣ ನಮ್ಮಲ್ಲಿರುವ ಅಂಗದಾನದ ಅರಿವಿನ ಕೊರತೆ. ಈ ಬಾಲಕನ ಕಸಿ ಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಲಿದೆ ಮತ್ತು ಅಂಗದಾನಕ್ಕೆ ಮುಂದೆ ಬರಲಿದ್ದಾರೆ ಎಂದು ನಂಬಿದ್ದೇನೆ ಎಂದು ನುಡಿದರು. 

ಚೆನ್ನೈ ಫೋರ್ಟಿಸ್‌ನ ಡಾ. ಕೆ.ಆರ್‌. ಬಾಲಕೃಷ್ಣನ್‌ ಮಾತನಾಡಿ, ಬಾಲಕನ ತಾಯಿ ನನ್ನ ಮಗನಿಗೆ ವೈದ್ಯರು ಹಾಗೂ ದಾನಿಯ ಕುಟುಂಬ ನೂತನ ಜೀವನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ ಎಂದರು. ಡಾ. ಮುರಳಿ ಚಕ್ರವರ್ತಿ, ಡಾ. ಮನೀಷ್‌ ಮಟ್ಟೂ, ರಾಜ್‌ ಗೋರೆ ಇತರರು ಉಪಸ್ಥಿತರಿದ್ದರು.

Advertisement

ಕಾರ್ಯಾಚರಣೆ ಹೇಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ತಂಡ ಜೀವಂತ ಹೃದಯವನ್ನು ತೆಗೆಯಲು ವಿಶಾಖಪಟ್ಟಣಕ್ಕೆ ಧಾವಿಸಿ, ಅಲ್ಲಿನ ಕೇರ್‌ ಆಸ್ಪತ್ರೆಯಿಂದ ಹೃದಯವನ್ನು ನಗರಕ್ಕೆ ತರಲು ಹಸಿರು ಕಾರಿಡಾರ್‌ ಮಾರ್ಗವನ್ನು
ರೂಪಿಸಿತ್ತು. ಒಂದು ಗಂಟೆ 26 ನಿಮಿಷದ ಒಳಗೆ ಬನ್ನೇರುಘಟ್ಟದ ರಸ್ತೆ ಫೋರ್ಟಿಸ್‌ ಆಸ್ಪತ್ರೆಗೆ ತಲುಪುವಂತೆ ಕಾರ್ಯನಿರ್ವಹಣೆ ಕೈಗೊಳ್ಳಲಾಗಿತ್ತು. ವಿಶಾಖಪಟ್ಟಣದಿಂದ ರಾತ್ರಿ 9.30ಕ್ಕೆ ಹೊರಟು ಬೆಂಗಳೂರಿನ ಆಸ್ಪತ್ರೆಗೆ ರಾತ್ರಿ 10.56ಕ್ಕೆ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next