ನವದೆಹಲಿ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬಂಡಾಯದ ಬಿಸಿ ತಟ್ಟಿದ್ದು, ಪಕ್ಷದ ಹಿರಿಯ ಮುಖಂಡ ಸುವೇಂದು ಅಧಿಕಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಗುರುವಾರ(ಡಿಸೆಂಬರ್ 17, 2020) ಶಾಸಕ ಜಿತೇಂದ್ರ ತಿವಾರಿ ಅಸಾನ್ಸೋಲ್ ಮುನ್ಸಿಪಲ್ ಕಾರ್ಪೋರೇಶನ್ ನ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮಬಂಗಾಳ ವಿಧಾನಸಭೆಯ ಪಾಂಡವೇಶ್ವರ್ ಕ್ಷೇತ್ರದಿಂದ ಜಿತೇಂದ್ರ ತಿವಾರಿ ಆಯ್ಕೆಯಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಾದ ಹಣಕಾಸಿನ ನೆರವು ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಟಿಎಂಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಿವಾರಿ, ನಾವು ಉತ್ತಮವಾದ ಸ್ಮಾರ್ಟ್ ಸಿಟಿಯಿಂದ ವಂಚಿತರಾಗಿದ್ದೇವೆ. ಅದೇ ರೀತಿ ಉತ್ತಮವಾದ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಿಂದಲೂ ವಂಚಿತರಾಗಿದ್ದೇವೆ. ಅಸಾನ್ ಸೋಲ್ ಹಲವು ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ ಎಂದು ದೂರಿದರು.
ಇದನ್ನೂ ಓದಿ:ಗುಂಡೇಟಿನಿಂದ ಗಾಯಗೊಂಡಿದ್ದ ಮಹಾದೇವ ಭೈರಗೊಂಡ ಆಸ್ಪತ್ರೆಯಿಂದ ಡಿಸ್ಚಾರ್ಜ್
ರಾಜ್ಯ ಸರ್ಕಾರ ಕೋಲ್ಕತಾ ಅಭಿವೃದ್ಧಿಗೆ ಹಣ ನೀಡಿದೆ ಆದರೆ ಅಸಾನ್ ಸೋಲ್ ಗೆ ಅಲ್ಲ ಎಂದು ಆರೋಪಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ನಾನು ಅಸಾನ್ ಸೋಲ್ ಮುನ್ಸಿಪಲ್ ಕಾರ್ಪೋರೇಶನ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿವಾರಿ ಘೋಷಿಸಿದರು. ಚುನಾವಣೆ ನಂತರ ಮತ್ತೆ ಬಂದು ಸ್ಥಗಿತಗೊಂಡಿದ್ದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.