ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡುತ್ತಿದ್ದಂತೆ ಅದೇ ಜಿಲ್ಲೆಯ ಮತ್ತೂಬ್ಬ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಅಂಬರೀಶ್ ಕೂಡ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ.
ಇತ್ತೀಚೆಗೆ ಕೆಂಪೇಗೌಡರ ಜಯಂತಿಗೆ ದುಬೈಗೆ ತೆರಳಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಅವರು ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಿ ಬಿಜೆಪಿಗೆ ಆಹ್ವಾನಿಸಿದ್ದು, ಇದಕ್ಕೆ ಅಂಬರೀಶ್ ಕೂಡ ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ಬಿಜೆಪಿಗೆ ಬರುವುದಿದ್ದರೂ ಅಧಿಕೃತವಾಗಿ ಸೇರುವುದು ಇನ್ನೂ ನಾಲ್ಕೈದು ತಿಂಗಳ ನಂತರವಷ್ಟೆ.
ಆದರೆ, ಕಾಂಗ್ರೆಸ್ ತೊರೆದಿರುವ ಎಸ್.ಎಂ.ಕೃಷ್ಣ ಅವರನ್ನು ಸ್ವಾಗತಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿರುವಾಗ ಅದೇ ಸಂದರ್ಭದಲ್ಲಿ ಅಂಬರೀಶ್ ಕೂಡ ಪಕ್ಷ ಸೇರ್ಪಡೆಯಾಗುವುದು ಕಷ್ಟಸಾಧ್ಯ. ಏಕೆಂದರೆ, ಮಂಡ್ಯ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಮತ್ತು ಅಂಬರೀಶ್ ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಬದ್ಧ ವೈರಿಗಳಂತಿದ್ದರು. ಹೀಗಾಗಿ ಇಬ್ಬರಲ್ಲಿ ಒಬ್ಬರು ಮಾತ್ರ ಕಾಂಗ್ರೆಸ್‌ಗೆ ಸೇರಬಹುದು ಎಂದು ಹೇಳಲಾಗುತ್ತಿದೆ.
ಒಂದೊಮ್ಮೆ ಅಂಬರೀಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಈಗಲೇ ನಿರ್ಧರಿಸಿದರೆ ಎಸ್.ಎಂ.ಕೃಷ್ಣ ಅವರು ಪಕ್ಷಕ್ಕೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಹೀಗಾಗಿ ಅಂಬರೀಶ್ ವಿಚಾರದಲ್ಲಿ ಕಾದು ನೋಡಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್.ಎಂ.ಕೃಷ್ಣ ಅವರನ್ನು ಸೇರಿಸಿಕೊಳ್ಳಲು ಹಸಿರು ನಿಶಾನೆ ತೋರಿಸಿರುವ ಬಿಜೆಪಿ ಹೈಕಮಾಂಡ್, ಅವರನ್ನು ಪಕ್ಷಕ್ಕೆ ಕರೆತರುವ ಜವಾಬ್ದಾರಿಯನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ವಹಿಸಿದೆ. ಯಡಿಯೂರಪ್ಪ ಅವರು ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸುವ ಹೊಣೆಯನ್ನು ಆರ್.ಅಶೋಕ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಅಶೋಕ್ ಈಗಾಗಲೇ ಎರಡು-ಮೂರು ಬಾರಿ ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಅವರ ಕಡೆಯಿಂದ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ. ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಬರಲು ಒಪ್ಪಿದರೆ ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ.
ಅಂಬರೀಶ್ ಸೇರ್ಪಡೆ ಏನಿದ್ದರೂ ಆರು ತಿಂಗಳ ನಂತರ
ಅಂಬರೀಶ್ ಬಿಜೆಪಿಗೆ ಸೇರಲು ಒಪ್ಪಿಕೊಂಡರೂ ಅವರು ಪಕ್ಷ ಸೇರ್ಪಡೆಯಾಗುವುದು ಇನ್ನು ಆರು ತಿಂಗಳ ಬಳಿಕವಷ್ಟೆ. ಏಕೆಂದರೆ, ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪ್ರಸ್ತುತ ಅಂಬರೀಶ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ವಿಧಾನಸಭಾ ಕ್ಷೇತ್ರವನ್ನು ಆರು ತಿಂಗಲಿಗಿಂತ ಹೆಚ್ಚು ಕಾಲ ಖಾಲಿ ಬಿಡುವಂತಿಲ್ಲ ಎಂಬ ನಿಯಮ ಇರುವುದರಿಂದ ಕೇವಲ ಮೂನಾಲ್ಕು ತಿಂಗಳ ಅವಧಿಗೆ ಮತ್ತೆ ಚುನಾವಣೆ ಎದುರಿಸುವ ಪರಿಸ್ಥಿತಿಯಲ್ಲಿ ಬಿಜೆಪಿಯೂ ಇಲ್ಲ. ಹೀಗಾಗಿ ಅಂಬರೀಶ್ ಬಿಜೆಪಿ ಸೇರುವುದು ಏನಿದ್ದರೂ ಮುಂದಿನ ಸೆಪ್ಟೆಂಬರ್ ಬಳಿಕವಷ್ಟೇ ಎಂದು ಬಿಜೆಪಿ ಮೂಲಗಲು ಹೇಳಿವೆ.