Advertisement

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

09:19 AM May 29, 2024 | Team Udayavani |

ಮೇ 29- ಕನ್ನಡ ಚಿತ್ರರಂಗಕ್ಕೆ ಈ ದಿನ ಖಂಡಿತ ನೆನಪಿರುತ್ತದೆ. ಅದರಲ್ಲೂ ಸಿನಿಮಾ ಪ್ರೇಮಿಗಳ ಪಾಲಿಗಂತೂ ಮೇ 29 ಅನ್ನೋದು ಹಬ್ಬದ ಸಂಭ್ರಮ ಇದ್ದಂತೆ.

Advertisement

ಹೌದು, ಇಂದು (ಮೇ 29) ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಹುಟ್ಟುಹಬ್ಬ. ಅವರು ದೈಹಿಕವಾಗಿ ನಮ್ಮ ಜೊತೆಗಿಲ್ಲ. ಆದರೆ, ಅಭಿಮಾನಿಗಳ ಹೃದಯದಲ್ಲಿ ಅವರಿಗೆ ಶಾಶ್ವತ ಸ್ಥಾನವಿದೆ. ಅಂಬರೀಶ್‌ ಅವರು ಯಾವತ್ತೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರಲ್ಲ. ಆದರೆ, ಮನೆಯವರ ಪ್ರೀತಿಗೆ, ಅಭಿಮಾನಿಗಳ ಒತ್ತಾಯಕ್ಕೆ ಅವರ ಜೊತೆಗೂಡಿ ಇಡೀ ದಿನ ಸಂಭ್ರಮಿಸುತ್ತಿದ್ದರು.

ಸದ್ಯ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಅಂಬರೀಶ್‌ ಇದ್ದಾಗ ಚಿತ್ರರಂಗದ ಏನೇ ಸಮಸ್ಯೆ ಆದರೂ ಅದನ್ನು ಬಗೆಹರಿಸುತ್ತಿದ್ದರು. ಆ ಮಟ್ಟದ ಬಾಂಧವ್ಯ ಹಾಗೂ ಸಾಮರ್ಥ್ಯ ಅವರದ್ದಾಗಿತ್ತು. ಇದೇ ಕಾರಣದಿಂದ ಕನ್ನಡ ಚಿತ್ರರಂಗ ಅಂಬರೀಶ್‌ ಅವರನ್ನು ಸದಾ ನೆನೆಯುತ್ತಲೇ ಇರುತ್ತದೆ. ಅಂಬರೀಶ್‌ ಮಾತುಗಳೇ ಹಾಗೆ. ಅವರು ಎಷ್ಟೇ ಜೋರು ಧ್ವನಿಯಲ್ಲಿ ಬೈದರೂ, ಗದರಿದರೂ ಅಭಿಮಾನಿಗಳು ಮಾತ್ರ ಅವರ ಮಾತನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದರು. ಅವರ ಮಾತಿಗೆ ಖುಷಿ ಪಟ್ಟು ಹಿರಿ ಹಿರಿ ಹಿಗ್ಗುತ್ತಿದ್ದರು. ಈಗ ಅಂಬರೀಶ್‌ ಇಲ್ಲ. ಅವರ ಬೈಗುಳವಿಲ್ಲ. ಆದರೆ, ಅಂಬರೀಶ್‌ ಅವರು ಹಂಚಿರುವ ಅಪಾರ ಪ್ರೀತಿ ಇದೆ. ಆ ಪ್ರೀತಿಯೇ ದೊಡ್ಡ ಅಭಿಮಾನಿ ವರ್ಗ. ಆ ಅಭಿಮಾನಿಗಳು ಅಂಬರೀಶ್‌ ಅವರ ಹುಟ್ಟುಹಬ್ಬ ಆಚರಿಸಲಿದ್ದಾರೆ.

ಅಂಬರೀಶ್‌ ಇದ್ದಾಗ, ಅವರ ಹುಟ್ಟುಹಬ್ಬದ ದಿನ ಬೇರೆಲ್ಲೂ ಹೋಗದೆ ಇಡೀ ದಿನ ಮನೆಯಲ್ಲೇ ಇರುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಮನೆಗೆ ಶುಭಾಶಯ ಹೇಳಲು ದೂರದ ಊರುಗಳಿಂದ ಆಗಮಿಸುತ್ತಿದ್ದ ಅಭಿಮಾನಿಗಳನ್ನು ಖುಷಿಪಡಿಸಿ, ಅವರುಗಳು ತಂದಿದ್ದ ಹಾರ, ಕೇಕ್‌ ಇತರೆ ಪ್ರೀತಿಯ ಉಡುಗೊರೆಗಳನ್ನು ಸ್ವೀಕರಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ಅಭಿಮಾನಿಗಳನ್ನು ಸಂತಸ ಪಡಿಸುತ್ತಿದ್ದರು. ಈಗ ಅಂಬರೀಶ್‌ ಇಲ್ಲದಿದ್ದರೂ, ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆಯೇ ಈ ವರ್ಷವೂ ಸಂಭ್ರಮಿಸಬೇಕೆಂಬ ಉದ್ದೇಶ ಅಭಿಮಾನಿಗಳಿಗಿದೆ.

ಇನ್ನು, ಅವರ ಕುಟುಂಬ ವರ್ಗ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್‌ ಅವರ ಸಮಾಧಿ ಬಳಿ ತೆರಳಿ, ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಅಂಬರೀಶ್‌ ಅವರಿಗೆ ಇಷ್ಟವಾದಂತಹ ತಿಂಡಿ, ತಿನಿಸು ಇಟ್ಟು ಪೂಜೆ ಸಲ್ಲಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next