ಹೊಸದಿಲ್ಲಿ: ನಾಯಕತ್ವದ ಬಗ್ಗೆ ತನ್ನೊಳಗೆ ಎದ್ದಿದ್ದ ಆಂತರಿಕ ಬೇಗುದಿಯನ್ನು ಆದಷ್ಟು ಬೇಗನೇ ನಂದಿಸಲು ತಡವಾಗಿಯಾದರೂ ಮನಸ್ಸು ಮಾಡಿರುವ ಕಾಂಗ್ರೆಸ್ ಹೈಕಮಾಂಡ್, “ಜಿ-23′ ಸದಸ್ಯರ ಜತೆಗೆೆ ಸರಣಿ ಮಾತುಕತೆ ಆರಂಭಿಸಿದೆ.
ಅದರ ಮುಂದುವರಿದ ಭಾಗವಾಗಿ ಶುಕ್ರವಾರ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು, “ಜಿ-23′ ತಂಡದ ಪ್ರಮುಖ ಸದಸ್ಯರಾದ ಗುಲಾಂ ನಬಿ ಆಜಾದ್‌ರವರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ ಚರ್ಚೆ ನಡೆಸಿದ್ದಾರೆ.
ಆದರೆ ಸಭೆಯ ಅನಂತರ ಸುದ್ದಿಗಾರ ರೊಂದಿಗೆ ಮಾತನಾಡಿರುವ ಆಜಾದ್, ಕೊಂಚ ವಿಭಿನ್ನ ಹೇಳಿಕೆ ನೀಡಿದ್ದಾರೆ. “ಮುಂದಿನ ಚುನಾವಣೆಗಳನ್ನು ಒಗ್ಗಟ್ಟಾಗಿ ಹೇಗೆ ಎದುರಿ ಸಬೇಕೆಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು” ಎಂದರಲ್ಲದೆ, ಪಕ್ಷದ ನಾಯಕತ್ವದ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ನಾವೆಂದೂ (ಜಿ-23) ಸದಸ್ಯರು ಸೋನಿಯಾ ಗಾಂಧಿಯವರ ರಾಜೀನಾಮೆಗೆ ಆಗ್ರಹಿಸಿಲ್ಲ’ ಎಂದಿದ್ದಾರೆ.
ನಾಯಕತ್ವವನ್ನು ಹೊಣೆ ಮಾಡುವುದು ಸರಿಯಲ್ಲ: ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸ್ ನಾಯಕತ್ವವನ್ನು ಹೊಣೆ ಮಾಡುವುದು ಸರಿಯಲ್ಲ. ಸದ್ಯದ ಮಟ್ಟಿಗೆ ಸೋನಿಯಾ ಗಾಂಧಿಯವರೇ ಪಕ್ಷ ವನ್ನು ಮುನ್ನಡೆಸಲಿ ಎಂದು ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
“ಪಕ್ಷಕ್ಕೆ ಹೊಸ ಅಧ್ಯಕ್ಷರು ಬೇಕೇಬೇಕು ಎನ್ನುವುದಾದರೆ, ಅದಕ್ಕೆ ಚುನಾವಣೆ ನಡೆಸ ಬೇಕು. ಅಧ್ಯಕ್ಷೀಯ ಚುನಾವಣೆಗೆ ಈಗ ಸಿದ್ಧತೆ ಆರಂಭಿಸಿದರೂ ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು. ಹಾಗಾಗಿ ಅಲ್ಲಿಯವರೆಗೆ ಸೋನಿಯಾ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರೆ ಒಳಿತು” ಎಂದಿದ್ದಾರೆ.
ಆಪ್, ಟಿಎಂಸಿ ಜತೆ ಮೈತ್ರಿಗೆ ಸಿದ್ಧ: ಇದೇ ವೇಳೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ, ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಆಜಾದ್ ಹೇಳಿದ್ದೇನು? :
- ಕಾಂಗ್ರೆಸ್ ಎನ್ನುವುದು ಒಂದೇ ಪಕ್ಷ. ಅದಕ್ಕಿರುವುದು ಒಬ್ಬರೇ ಅಧ್ಯಕ್ಷರು.
- ಸೋನಿಯಾ ಅವರು ನಾಯಕತ್ವ ತ್ಯಜಿಸಬೇಕೆಂದು ಯಾರೂ ಹೇಳಿಲ್ಲ.
- ನಾವು ಪಕ್ಷವನ್ನು ಬಲಪಡಿಸಲು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ ಅಷ್ಟೆ
- ಆಂತರಿಕವಾಗಿ ನೀಡಿರುವ ಶಿಫಾರಸನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ