ನವದೆಹಲಿ:ದೇಶದ್ರೋಹ ಆರೋಪದಲ್ಲಿ ನರಸಾಪುರ ಕ್ಷೇತ್ರದ ಸಂಸದ ಕಾನುಮುರಿ ರಘುರಾಮ ಕೃಷ್ಣಂ ರಾಜುವನ್ನು ಆಂಧ್ರಪ್ರದೇಶದ ಸಿಐಡಿ ಬಂಧಿಸಿದ ಒಂದು ವಾರದ ನಂತರ ಸುಪ್ರೀಂಕೋರ್ಟ್ ಶುಕ್ರವಾರ(ಮೇ 21) ಜಾಮೀನು ನೀಡಿದೆ.
ಇದನ್ನೂ ಓದಿ:ನಂದಿಗ್ರಾಮದಲ್ಲಿ ಸೋತ ಮಮತಾ ಬ್ಯಾನರ್ಜಿ ಮತ್ತೆ ಭವಾನಿಪುರ್ ಕ್ಷೇತ್ರದಿಂದ ಸ್ಪರ್ಧೆ
ವೈಎಸ್ ಆರ್ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಎದ್ದಿದ್ದ ಕೃಷ್ಣಂರಾಜು ಪಕ್ಷದ ವರಿಷ್ಠ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಸುಪ್ರೀಂಕೋರ್ಟ್ ರಜಾಕಾಲದ ಪೀಠದ ಜಸ್ಟೀಸ್ ವಿನೀತ್ ಸರನ್ ಮತ್ತು ಜಸ್ಟೀಸ್ ಬಿಆರ್ ಗವಾಯಿ ಅವರು, 59 ವರ್ಷದ ಕೃಷ್ಣಂ ರಾಜುವನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ, ನಮ್ಮ ದೃಷ್ಟಿಯಲ್ಲಿ ಆರ್ಮಿ ಆಸ್ಪತ್ರೆ ನೀಡಿದ ವರದಿಯಲ್ಲಿ ರಾಜು ಅವರಿಗೆ ಗಾಯಗಳಾಗಿರುವುದಾಗಿ ವರದಿ ನೀಡಿದೆ. ಮೇಲ್ನೋಟಕ್ಕೆ ಅರ್ಜಿದಾರರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಸಾಧ್ಯತೆ ಕಂಡುಬಂದಿರುವುದಾಗಿ ತಿಳಿಸಿದೆ.
ಸರ್ಕಾರದ ವಿರುದ್ಧ ಟೀಕಿಸಿದ್ದು ದೇಶದ್ರೋಹದ ಅಪರಾಧವಲ್ಲ, ಆದರೂ ಅವರನ್ನು ಬಂಧಿಸಿದ ಮೇಲೆ ಕಿರುಕುಳ ನೀಡಿ ಹಿಂಸಿಸಲಾಗಿತ್ತು ಎಂದು ಸಂಸದ ಕೃಷ್ಣಂ ರಾಜು ಪರ ವಕೀಲರಾದ ಮುಕುಲ್ ರೋಹ್ಟಗಿ ಜಾಮೀನು ಕೋರಿ ವಾದ ಮಂಡಿಸಿದ್ದರು.