Advertisement

ದೇವದುರ್ಗಕ್ಕೂ ಬಂದಿದ್ದ ರೆಬೆಲ್‌ ಅಂಬರೀಷ್‌

11:27 AM Nov 26, 2018 | |

ದೇವದುರ್ಗ: ಚಲನಚಿತ್ರ ಹಿರಿಯ ನಟ, ಕೇಂದ್ರದ ಮಾಜಿ ಸಚಿವ, ಮಂಡ್ಯದ ಗಂಡು ಎಂದೇ ಜನಪ್ರಿಯವಾಗಿದ್ದ ರೆಬೆಲ್‌ ಸ್ಟಾರ್‌ ಅಂಬರೀಷ್‌ ದೇವದುರ್ಗಕ್ಕೂ ಬಂದು ಹೋಗಿದ್ದರು ಎಂಬುದು ಇನ್ನು ನೆನಪು ಮಾತ್ರ.

Advertisement

2010ರ ಮಾ. 7-8ರಂದು ದೇವದುರ್ಗದ ಟಿಎಪಿಸಿಎಂಎಸ್‌ ಮೈದಾನದಲ್ಲಿ ನಡೆದ ರಾಯಚೂರು ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಭಾಗಿಯಾಗಿ ಸಮ್ಮೇಳನದ ಮೆರಗು ಹೆಚ್ಚಿಸಿದ್ದರು. 

ಆಗ ಉತ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಡಾ| ಶಿವರಾಜ್‌ ಪಾಟೀಲ ದೇವದುರ್ಗದಲ್ಲಿ ನಡೆದ ರಾಯಚೂರು ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆಗ ಗ್ರಂಥಾಲಯ ಮತ್ತು ಸಣ್ಣ ಉಳಿತಾಯ ಖಾತೆ ಸಚಿವರಾಗಿದ್ದ ಈಗಿನ ಶಾಸಕ ಕೆ.ಶಿವನಗೌಡ ನಾಯಕ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. 

ಚಿತ್ರನಟ ಅಂಬರೀಷರ ಕಟ್ಟಾ ಅಭಿಮಾನಿಯಾಗಿದ್ದ ಕೆ.ಶಿವನಗೌಡ ನಾಯಕ ತಮ್ಮ ರಾಜಕೀಯ ಗುರು, ಕೇಂದ್ರ ಸಚಿವ ಅನಂತಕುಮಾರ ಹಾಗೂ ಚಿತ್ರನಟ ಅಂಬರೀಷರನ್ನು ಸಮ್ಮೇಳನದ ಸಮಾರೋಪಕ್ಕೆ ಆಹ್ವಾನಿಸಿದ್ದರು.

ಅಂಬರೀಷ್‌ ಅವರನ್ನು ಸಿರವಾರ ಪಟ್ಟಣದಿಂದ ದೇವದುರ್ಗವರೆಗೆ ದ್ವಿಚಕ್ರ ವಾಹನಗಳ ಬೃಹತ್‌ ರ್ಯಾಲಿ ಮೂಲಕ ಸಮ್ಮೇಳನದ ವೇದಿಕೆಗೆ ಬರಮಾಡಿಕೊಳ್ಳಲಾಗಿತ್ತು. ಅಂಬರೀಷ, ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ ಭಾವಚಿತ್ರ ಇರುವ ಬೆಳ್ಳಿಯ ಸ್ಮರಣಿಕೆ ಮತ್ತು ಬೆಳ್ಳಿ ಖಡ್ಗ ನೀಡಿ ಅಂಬರೀಷ್‌ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಗಿತ್ತು.
 
ಅಂಬರೀಷ್‌ ತಮ್ಮ ಭಾಷಣದುದ್ದಕ್ಕೂ ಈ ಭಾಗದ ಜನರ ಅಭಿಮಾನವನ್ನು ಹೊಗಳಿದ್ದಲ್ಲದೇ, ಸಮ್ಮೇಳನಕ್ಕೆ ಕುಂಟುಬ ಸಮೇತ ಆಗಮಿಸಿದ್ದು ತಮ್ಮ ಪುಣ್ಯ ಎಂದಿದ್ದರು. ಅಂದು ಅಂಬರೀಷ್‌ ಅವರು ಈ ಭಾಗದ ಸಾಂಪ್ರದಾಯಿಕ ಆಹಾರವಾದ ಹುಗ್ಗಿ, ಎಳ್ಳೆಚ್ಚು ರೊಟ್ಟಿ, ಭರ್ತ ಪಲ್ಯ, ಶೇಂಗಾ ಹೋಳಿಗೆ ಸವಿದಿದ್ದರು. ಸಂಜೆ ಈ ಭಾಗದ ಪ್ರಸಿದ್ಧ ತಿನಿಸು ಮಂಡಾಳು ಒಗ್ಗರಣೆ, ಭಜಿ ಕೇಳಿ ತರಿಸಿಕೊಂಡು ಸವಿದಿದ್ದನ್ನು ಈ ಭಾಗದ ಮುಖಂಡರು ಸ್ಮರಿಸುತ್ತಾರೆ. 

Advertisement

ದೇವದುರ್ಗ ಪಟ್ಟಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರನ್ನು ನೋಡಲು ಪಕ್ಕದ ತಾಲೂಕು ಸುರುಪುರು, ಶಹಾಪುರು, ಯಾದಗಿರಿ, ಲಿಂಗಸುಗೂರು, ಸಿಂಧನೂರು, ಮ್ವಾನಿ ಸೇರಿ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಅಭಿಮಾನಿಗಳು ಸೇರಿದ್ದರು. ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ ಅಗಲಿಕೆಯ ನೋವು ಮರೆಯುವುದರೊಳಗೆ ಖ್ಯಾತ ನಟ ಅಂಬರೀಷ್‌ ಅಗಲಿಕೆ ಕನ್ನಡ ನಾಡಿನ ಕಲಾ ಲೋಕ ಹಾಗೂ ರಾಜಕೀಯ ರಂಗಕ್ಕೆ ಭರಿಸಲಾಗದ ಹಾನಿಯಾಗಿದೆ.

ರಾಯಚೂರಿಗೆ ನಟರಾಗಿ ಹತ್ತಿರ; ರಾಜಕಾರಣಿಯಾಗಿ ದೂರ
ರಾಯಚೂರು: ನಟ ರೆಬೆಲ್‌ ಸ್ಟಾರ್‌ ಅಂಬರೀಷ್‌ ನಟರಾಗಿ ಜಿಲ್ಲೆಯ ಜನರಿಗೆ ತೀರ ಹತ್ತಿರವಾಗಿದ್ದರು. ಆದರೆ, ರಾಜಕಾರಣಿಯಾಗಿ ಅವರು ಜಿಲ್ಲೆಗೆ ಅಷ್ಟೊಂದು ಹತ್ತಿರವಾಗಲಿಲ್ಲ. ರಾಯಚೂರಿಗೂ ಅಂಬರೀಷ್‌ ಅವರಿಗೂ ನಂಟಿದೆ. ಅವರು ಇಲ್ಲಿಗೆ ಬಂದು ಇಲ್ಲಿನ ಜನರ ಅಭಿಮಾನವನ್ನು ಕಣ್ತುಂಬಿಕೊಂಡು ಹೋಗಿದ್ದರು. ಆದರೆ, ಅವರು ರಾಜಕಾರಣಿಯಾಗಿ ಜಿಲ್ಲೆಗೆ ಅಷ್ಟೊಂದು ಹತ್ತಿರವಾಗಲಿಲ್ಲ. ಕೇಂದ್ರ ಮತ್ತು ರಾಜ್ಯ ಸಚಿವರಾದರೂ ಜಿಲ್ಲೆಗೆ ಅವರು ರಾಜಕಾರಣಿಯಾಗಿ ಒಮ್ಮೆಯೂ ಬರಲಿಲ್ಲ. ದೇವದುರ್ಗದಲ್ಲಿ 2010ರಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರನ್ನು ವಿಜೃಂಭಣೆಯಿಂದ ಸ್ವಾಗತಿಸಲಾಗಿತ್ತು. ದೊಡ್ಡ ಉಡುಗೊರೆ
ನೀಡಿ ಆಗಿನ ಸಚಿವ ಶಿನವಗೌಡ ನಾಯಕ ಅಭಿನಂದಿಸಿದ್ದರು. ಆದರೆ, ವಸತಿ ಸಚಿವರಾಗಿದ್ದಾಗ ಸರ್ಕಾರಿ ಕಾರ್ಯಕ್ರಮಕ್ಕೆ ಅವರು ಬರಬೇಕಾಗಿತ್ತು.

ವೇಳಾಪಟ್ಟಿಯೂ ನಿಗದಿಯಾಗಿತ್ತು. ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಯಿತು. ಅದಾದ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಒಂದು ವೇಳೆ ಸಚಿವರಾಗಿ ಬಂದಿದ್ದರೆ ಜಿಲ್ಲೆಯಲ್ಲಿನ ವಸತಿ ಸಮಸ್ಯೆಗೆ ಮುಕ್ತಿ ಸಿಗುತ್ತಿತ್ತೇನೋ. ನಟರಾಗಿ ಅಂಬರೀಷ್‌ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. 

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next