Advertisement
ಸಿ.ಎ. ಓದಬೇಕು ಎಂಬ ಕನಸು ಕಾಣುತ್ತ ನಾನು ಪಿಯುಸಿಯಲ್ಲಿ ಕಾಮರ್ಸ್ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಆದರೆ, ಬಳಿಕ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಆಟೋಮೊಬೈಲ್ ವಿಭಾಗದಲ್ಲಿ ಡಿಪ್ಲೊಮಾ ಓದಿದೆ. ನನ್ನ ತಂದೆ ನಾರಾಯಣ್ ನಾಯಕ್ ಅವರಿಗೆ ನಾನು ಸರ್ಕಾರಿ ಉದ್ಯೋಗ ಹಿಡಿದು, ಆರ್ಥಿಕವಾಗಿ ಭದ್ರತೆ ಇರುವ ಜೀವನ ನಡೆಸಬೇಕು ಎಂಬ ಆಸೆಯಿತ್ತು. ಆದ್ದರಿಂದ, ಅವರು ಉದ್ಯೋಗಾವಕಾಶಗಳ ಕುರಿತು ಅಲ್ಲಲ್ಲಿ ಬರುವ ಪ್ರಕಟಣೆಗಳನ್ನು ಗಮನಿಸುತ್ತಲೇ ಇದ್ದರು. ಆಗ ಅವರಿಗೆ ಪ್ರಕಟಣೆಯೊಂದು ಕಣ್ಣಿಗೆ ಬಿತ್ತು. ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೋಕೋಪೈಲಟ್ ಹುದ್ದೆಗೋಸ್ಕರ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಪ್ಪನೇ ಅರ್ಜಿಯನ್ನು ತುಂಬಿಸಿ ನನ್ನ ಬಳಿ ಸಹಿ ಮಾಡಲು ಹೇಳಿದಾಗ ನನಗೆ ಅಷ್ಟೇನೂ ಇಷ್ಟವಿರಲಿಲ್ಲ. 2006ರಲ್ಲಿ ಪರೀಕ್ಷೆಗೋಸ್ಕರ ಆಹ್ವಾನ ಬಂದಾಗ ಅಮ್ಮ ಟೀಲಾ ಕೂಡ ಪರೀಕ್ಷೆ ಬರೆಯುವಂತೆ ಒತ್ತಾಯ ಮಾಡಿದರು. ಹಾಗಾಗಿ, ತಿರುವನಂತಪುರಕ್ಕೆ ತೆರಳಿ ರೈಲ್ವೇ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆ ಬರೆದೆ. ಎರಡು ಪರೀಕ್ಷೆಗಳಲ್ಲಿಯೂ, ವೈದ್ಯಕೀಯ ತಪಾಸಣೆಯಲ್ಲಿಯೂ ಯಶಸ್ವಿಯಾಗಿ ಪಾಸಾದಾಗ ನಾನು ತಲೆ ಚಚ್ಚಿಕೊಂಡೆ. ಪರೀಕ್ಷೆ ಬರೆಯಲು ಹಲವಾರು ಮಂದಿ ಮಹಿಳೆಯರು ಬಂದಿದ್ದರು. ಕೆಲವರಷ್ಟೇ ಕನ್ನಡದವರಿದ್ದರು. ತಮಿಳುನಾಡಿನ ಈರೋಡ್‌ನಲ್ಲಿ ತರಬೇತಿ ನಡೆಯಿತು. ಆಗ ಇನ್ನೂ ಅಳುವೇ ಬಂದಿತ್ತು. ಕಲಿಕೆಯೇನೂ ಕಷ್ಟವಾಗಲಿಲ್ಲ. ಆದರೆ ಮಲಯಾಳ ಬಾರದೇ ಇದ್ದುದರಿಂದ ಬಹಳ ಕಷ್ಟವಾಯಿತು. ಮತ್ತೆ ಅಪ್ಪನೇ ನನಗೆ ಪ್ರೋತ್ಸಾಹ ನೀಡಿದರು. “ಒಂದಾರು ತಿಂಗಳು ಪ್ರಯತ್ನಿಸು, ಮತ್ತೂ ಕಷ್ಟವಾದರೆ ವಾಪಸ್ ಬಂದುಬಿಡು’ ಎಂದು ಹೇಳಿದರು. ಆರು ತಿಂಗಳು ಕಳೆಯುವಷ್ಟರಲ್ಲಿ ನಾನು ಭಾಷೆಯನ್ನು ಕಲಿಯಲು ಶುರು ಮಾಡಿದ್ದೆ. ಹೊಸ ಮಾದರಿಯ ಕೆಲಸಕ್ಕೆ ನನ್ನ ಮನಸ್ಸೂ ಒಗ್ಗಿತು. ತರಬೇತಿಯ ಬಳಿಕ ಮೊತ್ತಮೊದಲು ಈರೋಡ್‌ನಿಂದ ಉಟ್ಟುಕುಳಿಗೆ ರೈಲು ಓಡಿಸಿದ ನೆನಪು ಈಗಲೂ ಇದೆ.
Related Articles
Advertisement
ಮೊತ್ತಮೊದಲು ರೈಲು ಇಂಜಿನ್ ಓಡಿಸುವಾಗ ನಿಜವಾಗಲೂ ಹೃದಯದ ಬಡಿತ ಹೆಚ್ಚಾಗಿತ್ತು. ನಾನು ಸ್ಕೂಟರ್ ಮತ್ತು ಕಾರು ಚಾಲನೆಯನ್ನೂ ಕಲಿತಿದ್ದೇನೆ. ಅವುಗಳನ್ನು ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕು. ಆದರೆ, ರೈಲು ಚಾಲನೆಯಲ್ಲಿ ಕಣ್ಣು ದೂರದ ಸಿಗ್ನಲ್‌ನ ಮೇಲೆಯೇ ಇರಬೇಕು. ಗಮನ ಚೂರು ತಪ್ಪಿದರೂ ಬ್ರೇಕ್ ಹಾಕುವುದು ನಿಧಾನವಾಗಿ ರೈಲು ನಿಗದಿತ ಪ್ರದೇಶಕ್ಕಿಂತ ಮುಂದೆ ಚಲಿಸಿಬಿಡುತ್ತದೆ. ಮದುವೆ ಸಂದರ್ಭದಲ್ಲಿ ನನ್ನ ಈ ವಿಭಿನ್ನ ವೃತ್ತಿ ಹೆಚ್ಚೇನೂ ತೊಡಕಾಗಲಿಲ್ಲ. ಪತಿ ವಿ. ಸತೀಶ್ ಅವರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದಾರೆ. ಸಾಕಷ್ಟು ರಜೆಗಳಿದ್ದರೂ, ಶಿಫ್ಟ್ ಡ್ನೂಟಿ ಇರುವುದರಿಂದ ಸ್ವಲ್ಪ ಹೊಂದಾಣಿಕೆ ಕಷ್ಟವೆನಿಸಿದ್ದುಂಟು. ನನ್ನ ಸಹೋದ್ಯೋಗಿಗಳು ತುಂಬ ಸಹಕಾರ ಮನೋಭಾವದವರಾಗಿದ್ದರಿಂದ ಎಲ್ಲವನ್ನೂ ನಿಭಾಯಿಸುವುದು ಸಾಧ್ಯವಾಯಿತು. ದೊಡ್ಡ ಮಗ ಹಿತೇಶ್ 6ನೆಯ ತರಗತಿ ಓದುತ್ತಾನೆ. ಚಿಕ್ಕವನು ದಿವ್ಯೇಶ್ 2ನೆಯ ತರಗತಿ. ನನ್ನ ಮಾವ ಅಂದರೆ ಪತಿಯ ತಂದೆ ಕೃಷ್ಣ ನಾಯಕ್ ಕತೆಗಳನ್ನು ಹೇಳುತ್ತ ಮಕ್ಕಳ ಮುದ್ದಿನ ಅಜ್ಜ ಎನಿಸಿಕೊಂಡಿದ್ದಾರೆ. ಅತ್ತೆ ಲಕ್ಷ್ಮೀ ಅವರೇ ಮಕ್ಕಳನ್ನು ಸಾಕಿ ಸಲಹಿದವರು. ಹಾಗಾಗಿ, ಈ ವೃತ್ತಿಯನ್ನು ನಿಭಾಯಿಸುವುದು ಸಾಧ್ಯವಾಯಿತು.
ಈ ವೃತ್ತಿಯಲ್ಲಿ ನಾನು ಬಹಳ ಸಂಕಟಪಟ್ಟ ದಿನವೆಂದರೆ ಅದು ರೈಲು ಇಂಜಿನ್‌ಗೆ ದನ ಢಿಕ್ಕಿ ಹೊಡೆದಾಗ. ನಾನು ಇಂಜಿನ್‌ನ್ನು ಹಿಂದಕ್ಕೆ ಚಲಾಯಿಸುವಾಗಲೇ ಅರಿವಾದ್ದು, ಮುಂಭಾಗದಲ್ಲಿ ಎಂಜಿನ್‌ಗೆ ದನ ಢಿಕ್ಕಿ ಹೊಡೆದಿದೆ ಅಂತ. ಆವತ್ತು ಬಹಳ ಸಂಕಟವಾಗಿತ್ತು.
ಶಂಟರ್ ಆದ ಬಳಿಕ ಮತ್ತೆ ಭಡ್ತಿ ಸಿಗುವ ಅವಕಾಶವಿತ್ತು. ಆದರೆ, ಭಡ್ತಿ ಪಡೆದರೆ ವರ್ಗಾವಣೆಗೆ ಸಿದ್ಧಳಾಗಬೇಕಾಗುತ್ತದೆ ಎಂಬ ಕಾರಣಕ್ಕೆ ನಾನು ಭಡ್ತಿ ಬೇಡ ಎಂದು ಬರೆದುಕೊಟ್ಟಿದ್ದೇನೆ. ಮಕ್ಕಳ ವಿದ್ಯಾಭ್ಯಾಸ ಒಂದು ಹಂತಕ್ಕೆ ಬರುವವರೆಗೆ ಇದೇ ಸ್ಟೇಷನ್‌ನಲ್ಲಿ ಇದ್ದರೆ ಒಳಿತು ಎಂಬ ಅಭಿಪ್ರಾಯ ನನ್ನದು.
ದಕ್ಷಿಣಕನ್ನಡ ಜಿಲ್ಲೆಯವರು ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಗುರುತಿಸಿ, ಬೆಂಬತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅಪರೂಪ. ಆದರೆ ಈ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ. -ವನಿತಾಶ್ರೀ ವನಿತಾಶ್ರೀ