Advertisement

ಜಿಪಂ, ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ

02:30 PM Feb 16, 2021 | Team Udayavani |

ಮಂಡ್ಯ: ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ಆಡಳಿತ ಮಂಡಳಿಗಳ ಅವಧಿ ಮುಗಿಯುತ್ತಾ ಬಂದಿರುವುದರಿಂದ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಅದರಂತೆ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಿ ಫೆ.22ರಂದು ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದೆ.

Advertisement

ಜಿಪಂ 5 ಕ್ಷೇತ್ರಗಳ ಏರಿಕೆ: ಮಂಡ್ಯ ಜಿಲ್ಲೆಯ ಜಿಲ್ಲಾ ಪಂಚಾಯಿತಿಗೆ ಕಳೆದ ಬಾರಿ 41 ಕ್ಷೇತ್ರಗಳಿದ್ದವು.ಆದರೆ, ಈ ಬಾರಿ ಆ ಕ್ಷೇತ್ರಗಳ ಸಂಖ್ಯೆಯನ್ನು 5ಕ್ಕೆ ಏರಿಸಿದ್ದು, ಒಟ್ಟು 46 ಕ್ಷೇತ್ರಗಳನ್ನು ನಿಗದಿಪಡಿಸಿದೆ. ಮಂಡ್ಯ 8, ಮದ್ದೂರು 8, ಮಳವಳ್ಳಿ 8, ಪಾಂಡವಪುರ 5, ಶ್ರೀರಂಗಪಟ್ಟಣ 5, ಕೆ.ಆರ್‌.ಪೇಟೆ 7 ಹಾಗೂ ನಾಗಮಂಗಲ 5 ಕ್ಷೇತ್ರಗಳಿಗೆ ನಿಗದಿಪಡಿಸಲಾಗಿದೆ. ಕಳೆದ ಬಾರಿ ಮಂಡ್ಯ ತಾಲೂಕಿನಲ್ಲಿ 7 ಕ್ಷೇತ್ರಗಳಿದ್ದವು. ಈಗ 1 ಕ್ಷೇತ್ರ ಹೆಚ್ಚುವರಿಯಾಗಿ ನೀಡಲಾಗಿದೆ. ಅದರಂತೆ ಕೆ.ಆರ್‌. ಪೇಟೆ, ಮದ್ದೂರು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ತಲಾ ಒಂದೊಂದು ಕ್ಷೇತ್ರ ಹೆಚ್ಚುವರಿ ನೀಡಲಾಗಿದೆ. ಅದರಂತೆ ಕ್ಷೇತ್ರ ವ್ಯಾಪ್ತಿಗಳನ್ನು ಪುನರ್‌ ವಿಂಗಡಿಸಿ ಸಲ್ಲಿಸಲು ಸೂಚಿಸಿದೆ.

ತಾಪಂ 29 ಕ್ಷೇತ್ರ ಕಡಿತ: ಅದರಂತೆ ಕಳೆದ ಬಾರಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ 155 ಕ್ಷೇತ್ರಗಳಿದ್ದ ತಾಪಂ ಕ್ಷೇತ್ರಗಳನ್ನು 126ಕ್ಕೆ ಇಳಿಸಲಾಗಿದೆ. ಇದರಿಂದ ಒಟ್ಟು 29 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಮಂಡ್ಯ 28 ಕ್ಷೇತ್ರಗಳಿಂದ 23ಕ್ಕಿಳಿಸಲಾಗಿದೆ. ಅದರಂತೆ ಮದ್ದೂರು 27ರಿಂದ 22ಕ್ಕೆ, ಮಳವಳ್ಳಿ 25ರಿಂದ 20ಕ್ಕೆ, ಪಾಂಡವಪುರ 17ರಿಂದ 14ಕ್ಕೆ, ಶ್ರೀರಂಗಪಟ್ಟಣ 16ರಿಂದ 13ಕ್ಕೆ, ಕೆ.ಆರ್‌.ಪೇಟೆ 24ರಿಂದ 19ಕ್ಕೆ ಹಾಗೂ ನಾಗ ಮಂಗಲ ತಾಲೂಕಿ ನಲ್ಲಿ 18ರಿಂದ 13ಕ್ಕಿಳಿಸಲಾಗಿದೆ.

ಜನಸಂಖ್ಯಾ ಆಧಾರದಲ್ಲಿ ವಿಂಗಡಣೆ: ಎಲ್ಲ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಏರಿಕೆ ಹಾಗೂ ತಾಲೂಕು ಪಂಚಾಯಿತಿ ಇಳಿಕೆ ಮಾಡಿ ನಿಗದಿಪಡಿಸಿದೆ. ಮಾರ್ಗಸೂಚಿಗಳನ್ವಯ ಕ್ಷೇತ್ರಗಳ ನಕ್ಷೆ ಗುರುತಿಸಲು ಸೂಚಿಸಲಾಗಿದೆ.

ಪುನರ್‌ ವಿಂಗಡಣೆಗೆ ಮಾನದಂಡಗಳು: ಆಯಾ ತಾಲೂಕಿನ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಗಡಿ ಗುರುತಿಸಬೇಕು. ನಿಗದಿಪಡಿಸಿದ ಗಡಿ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾದಲ್ಲಿ ಪಕ್ಕದ ಗ್ರಾಮಗಳನ್ನು ವಿಭಜಿಸದೆ ಸಂಪೂರ್ಣವಾಗಿ ಸೇರಿಸಿಕೊಂಡು ಕ್ಷೇತ್ರ ನಿಗದಿಪಡಿಸಬೇಕು.

Advertisement

ಭೌಗೋಳಿಕವಾಗಿ ಗ್ರಾಪಂಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗ ಅನುಗುಣವಾಗಿ ಮತದಾರರ ಸಂಖ್ಯೆ ಹಾಗೂ ಗ್ರಾಮ ದೊಡ್ಡದಾಗಿದ್ದರೆ, ಆ ಗ್ರಾಮವನ್ನೇ ಕ್ಷೇತ್ರವನ್ನಾಗಿಹೆಸರಿಡಬಹುದು. ಈಗಾಗಲೇ ತಾಲೂಕುಗಳಲ್ಲಿ ಕ್ಷೇತ್ರಗಳ ಬದಲಾವಣೆ ಇಲ್ಲದಿದ್ದರೆ ಆ ತಾಲೂಕಿನಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ತಿಳಿಸಿದೆ.

ಅವಧಿ ಮುಕ್ತಾಯ :  ಇನ್ನೂ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮೂರು ತಿಂಗಳೊಳಗೆ ಮುಕ್ತಾಯವಾಗಲಿದ್ದು, ಮೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಇದರಿಂದ ಆದಷ್ಟು ಬೇಗ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಧ್ಯಕ್ಷೆ ನಾಗರತ್ನಸ್ವಾಮಿ ತರಾತುರಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

ತಾಪಂ ರದ್ದುಪಡಿಸುವ ಚರ್ಚೆ :

ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನೇ ರದ್ದುಪಡಿಸಲು ರಾಜ್ಯ ಸರ್ಕಾರದ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿದೆ. ಆದರೆ, ಇದುವರೆಗೂ ಯಾವುದೇ ಆದೇಶ ಹೊರ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ಚುನಾವಣೆ ಆಯೋಗ ಕ್ಷೇತ್ರಗಳನ್ನು ಕಡಿತಮಾಡಿ ಪುನರ್‌ ವಿಂಗಡಿಸಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಜಿಪಂ ಅಧಿಕಾರಕ್ಕೆ ಗುದ್ದಾಟ :

ಜಿಲ್ಲಾ ಪಂಚಾಯ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷೆ ನಾಗರತ್ನಸ್ವಾಮಿ ಅವರನ್ನು ಕೆಳಗಿಳಿಸಬೇಕು ಎಂದು ಹಠತೊಟ್ಟಿರುವ ಸ್ವಪಕ್ಷ ಜೆಡಿಎಸ್‌ ಅಧಿಕಾರಕ್ಕಾಗಿ ಹಗ್ಗ-ಜಗ್ಗಾಟ ಮುಂದುವರಿದಿದೆ. ಇದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಯಾವುದೇ ಯೋಜನೆಗಳಿಗೆ ಅನುಮೋದನೆ ಸಿಗದೆ ಜಿಪಂ ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಮಧ್ಯಪ್ರವೇಶಿಸಿ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಇದರ ವಿರುದ್ಧ ತಿರುಗಿಬಿದ್ದಿರುವ ಜೆಡಿಎಸ್‌ ಸದಸ್ಯರು ಸ್ಥಾಯಿ ಸಮಿತಿ ಸಭೆಗಳಲ್ಲಿ ನಿಗದಿಯಾಗಿದ್ದ ಅನುದಾನ ತಡೆ ಹಿಡಿದು ಅಧ್ಯಕ್ಷರು ಹೊಸದಾಗಿ ಪಟ್ಟಿ ನೀಡಿ, ಅನುಮೋದನೆ ಪಡೆದಿರುವುದು ಕಾನೂನು ಬಾಹಿರ. ಇದರಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿದೆ ಎಂದು ಕಿಡಿಕಾರಿದ್ದು, ಗುದ್ದಾಟ ಮುಂದುವರಿದಿದೆ.

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next