ಭಾರತೀಯ ಸೇನೆಯ ಗುಪ್ತಚರ ಮಾಹಿತಿ ಮೇರೆಗೆ ಕರ್ನಾಟಕದ ಬೆಂಗಳೂರು ನಗರದ ಕೇಂದ್ರ ಅಪರಾಧ ವಿಭಾಗ ಪೊಲೀಸರು ರಾಜ್ಯದಲ್ಲಿ ಸಕ್ರಿಯವಾಗಿದ್ದ ಅಂತಾರಾಷ್ಟ್ರಿಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಬೃಹತ್ ಜಾಲ ಪತ್ತೆ ಹಚ್ಚಿದ್ದು, ಪಾಕಿಸ್ಥಾನದ ಗುಪ್ತಚರ ವಿಭಾಗದ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಭಾರತೀಯ ಸೇನಾ ಕಚೇರಿಗೆ ಕರೆ ಮಾಡಿದಾಗ ಇಂತಹ ಸ್ಫೋಟಕ ವಿಚಾರ ಬಯಲಾಗಿತ್ತು.
ಬಹುತೇಕ ಪಾಕಿಸ್ಥಾನ, ದುಬಾೖ, ಅಮೆರಿಕ, ಅರಬ್ ರಾಷ್ಟ್ರಗಳಿಂದ ಬರುತ್ತಿದ್ದ ಕರೆಗಳೇ ಪರಿವರ್ತನೆಯಾಗುತ್ತಿರುವ ಸ್ಫೋಟಕ ಮಾಹಿತಿ ಈ ಮೂಲಕ ಬಯಲಾಗಿತ್ತು. ಅದರಿಂದ ದೇಶ, ರಾಜ್ಯದ ಆಂತರಿಕ ಭದ್ರತೆಗೂ ತೊಡಕಾಗುತ್ತಿರುವ ಮಾಹಿತಿ ಸಿಕ್ಕಿತ್ತು. ಅಷ್ಟು ಮಾತ್ರವಲ್ಲದೆ ಕೇರಳ ಮೂಲದ ವ್ಯಕ್ತಿಗಳೇ ಈ ಬೃಹತ್ ಜಾಲದ ಸೂತ್ರಧಾರಿಗಳು ಎಂಬುದು ಪತ್ತೆಯಾಗಿದೆ.
ಕೇರಳ ಮೂಲದ ಇಬ್ರಾಹಿಂ ಪುಲ್ಲಟ್ಟಿ, ಆತನ ಆರು ಮಂದಿ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದರು. ಇಬ್ರಾಹಿಂ ಪುಲ್ಲಟ್ಟಿ ದುಬಾೖ ಯಲ್ಲಿ ಕೆಲಸ ಮಾಡಿಕೊಂಡು, ಕರೆಗಳ ಪರಿವರ್ತನೆ ಮಾಡುವುದನ್ನು ಅಲ್ಲಿಯೇ ಕರಗತ ಮಾಡಿಕೊಂಡಿದ್ದ. ಅದನ್ನು ರಾಜ್ಯ ರಾಜಧಾನಿಯಲ್ಲಿ ಅಳವಡಿಸಿ ಭಾರತೀಯ ದೂರ ಸಂಪರ್ಕ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಇಬ್ರಾಹಿಂ ಪುಲ್ಲಟ್ಟಿ ಪಾಕಿಸ್ಥಾನ, ದುಬಾೖಯಲ್ಲಿ ನೂರಾರು ಮಂದಿ ಗ್ರಾಹಕರನ್ನು ಹೊಂದಿದ್ದಾನೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ರಾಷ್ಟ್ರಿಯ ತನಿಖಾ ಸಂಸ್ಥೆಗಳಲ್ಲಿ ಕುತೂಹಲ ಮೂಡಿಸಿದೆ. ಇಬ್ರಾಹಿಂ ಪುಲ್ಲಟ್ಟಿ ಯಾವುದಾದರೂ ಭಯೋತ್ಪಾದನ ಸಂಘಟನೆ ಸದಸ್ಯರ ಜತೆ ಕೈ ಜೋಡಿಸಿದ್ದಾನೆಯೇ ಅಥವಾ ಈತನ ಅಕ್ರಮ ದಂಧೆಯಲ್ಲಿರುವ ಗ್ರಾಹಕರ ಪೈಕಿ ಯಾರಾದರೂ ಉಗ್ರ ಸಂಘಟನೆ ಸದಸ್ಯರಿದ್ದಾರೆಯೇ ಎಂಬೆಲ್ಲ ಪ್ರಶ್ನೆ ಈಗ ತನಿಖಾ ಸಂಸ್ಥೆಗಳಲ್ಲಿ ಹುಟ್ಟಿಕೊಂಡಿದೆ.
ಅದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನೆ, ಕರ್ನಾಟಕ ಪೊಲೀಸರು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಗುಪ್ತಚರ ಇಲಾಖೆ (ಐಬಿ), ರಾ ತನಿಖಾ ಸಂಸ್ಥೆಗಳು ತನಿಖೆಯನ್ನು ಚರುಕುಗೊಳಿಸಿವೆ. ಅಲ್ಲದೆ ಭಾರತೀಯ ಸೇನಾ ಕಚೇರಿಗೆ ಕರೆ ಮಾಡಿದ ವ್ಯಕ್ತಿ ಯಾರು, ಆತನ ಹಿನ್ನೆಲೆ ಏನು ಎಂಬುದು ಇದುವರೆಗೂ ತನಿಖಾ ಸಂಸ್ಥೆಗಳಿಗೆ ಸಿಕ್ಕಿಲ್ಲ. ಮತ್ತೂಂದೆಡೆ ಪ್ರಕರಣದ ಆರೋಪಿಗಳು ಕೇವಲ ಲಾಭಕ್ಕಾಗಿ ಮಾಡುತ್ತಿದ್ದರೆ ಅಥವಾ ದೇಶದ ಆಂತರಿಕ ಭದ್ರತೆ, ವಿಧ್ವಂಸಕ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇನ್ನು, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕೇರಳದ ಇಬ್ಬರು ಕಿಂಗ್ ಪಿನ್‌ಗಳೇ ಅಕ್ರಮ ದಂಧೆಯ ಮಾಸ್ಟರ್ ಮೈಂಡ್‌ಗಳು ಎಂಬ ಸತ್ಯ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಬಯಲಾಗಿದೆ. ಅವರ ಬಂಧನದ ಅನಂತರವೇ ಕರೆಗಳ ಪರಿವರ್ತನೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ. ಒಂದು ವೇಳೆ ಹಣಕ್ಕಾಗಿಯೇ ಈ ರೀತಿಯ ವಂಚನೆ ಮಾಡುತ್ತಿದ್ದರೆ ಅದರಿಂದ ಭಾರತೀಯ ದೂರಸಂಪರ್ಕ ಇಲಾಖೆಗೆ ಎಷ್ಟು ನಷ್ಟ ಉಂಟಾಗುತ್ತಿತ್ತು. ಎಷ್ಟು ವರ್ಷಗಳಿಂದ ಈ ರೀತಿ ವಂಚನೆ ನಡೆಯುತ್ತಿದೆ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.