Advertisement

ಇನ್ನೂ ಆರಂಭಗೊಳ್ಳದ “ನೈಜ’ಮೀನುಗಾರಿಕೆ

12:52 PM Oct 11, 2019 | sudhir |

ಗಂಗೊಳ್ಳಿ: ಮೀನುಗಾರಿಕೆ ಋತು ಆರಂಭವಾಗಿ ಸರಿ ಸುಮಾರು ಎರಡು ತಿಂಗಳು ಕಳೆದರೂ, ಇನ್ನೂ ಗಂಗೊಳ್ಳಿ ಸಹಿತ ಹೆಚ್ಚಿನ ಬಂದರುಗಳಲ್ಲಿ ನೈಜ ಮೀನುಗಾರಿಕೆಯೇ ಆರಂಭವಾಗಿಲ್ಲ. ಒಂದೊಂದು ಬೋಟು, ದೋಣಿಗಳಿಗೆ ಕನಿಷ್ಠ ಅರ್ಧದಷ್ಟು ಕೂಡ ಆದಾಯ ಬಂದಿಲ್ಲ.

Advertisement

ಕಳೆದ ಆಗಸ್ಟ್‌ನಿಂದ ಈ ಬಾರಿಯ ಮೀನುಗಾರಿಕೆಗೆ ಇದ್ದ ನಿಷೇಧ ತೆರವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸುಮಾರು 2 ತಿಂಗಳ ಕಾಲ ಮೀನುಗಾರಿಕೆ ನಡೆಯುತ್ತಿದ್ದರೂ ಬಂಗುಡೆ, ಬೈಗೆ, ಅಂಜಲ್‌ನಂತಹ ಉತ್ತಮ ಬೆಲೆ ಸಿಗುವಂತಹ ಮೀನುಗಳು ಇನ್ನೂ ಸಿಕ್ಕಿಯೇ ಇಲ್ಲ. ಈ ಮತ್ಸÂಕ್ಷಾಮದಿಂದಾಗಿ ಮೀನುಗಾರರು ತತ್ತರಿಸಿ ಹೋಗಿದ್ದಾರೆ.

ಗಂಗೊಳ್ಳಿ ಮಾತ್ರವಲ್ಲದೆ ಮಲ್ಪೆ, ಮರವಂತೆ, ಕೋಡಿ – ಕನ್ಯಾನ, ಕೊಡೇರಿ, ಅಳ್ವೆಗದ್ದೆ, ಹೆಜಮಾಡಿ ಸೇರಿದಂತೆ ಎಲ್ಲ ಬಂದರುಗಳಲ್ಲಿ ಬೋಟು, ದೋಣಿಗಳಿಗೆ ಮತ್ಸÕÂಕ್ಷಾಮ ತಲೆದೋರಿದೆ. ಪ್ರತಿ ನಿತ್ಯ ಮೀನುಗಾರಿಕೆಗೆ ತೆರಳಿದರೂ, ಮೀನು ಸಿಗದೇ ಬರಿಗೈಯಲ್ಲೇ ವಾಪಸಾಗುತ್ತಿದ್ದಾರೆ.

ಡೀಸೆಲ್‌, ಸೀಮೆ ಎಣ್ಣೆಯಷ್ಟು ಇಲ್ಲ
ಕೆಲವು ಬೋಟು, ದೋಣಿಗಳಿಗಂತೂ ಕೆಲವು ಬಾರಿ ಡೀಸೆಲ್‌, ಸೀಮೆಎಣ್ಣೆಗೆ ಭರಿಸಿದಷ್ಟು ಹಣವೂ ಕೂಡ ಮೀನುಗಾರಿಕೆಗೆ ತೆರಳಿದಾಗ ಸಿಗುತ್ತಿಲ್ಲ ಎನ್ನುವ ಅಳಲನ್ನು ಮೀನುಗಾರರು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರಿಗೆ ಈವರೆಗೆ ಒಟ್ಟು 5 ಲಕ್ಷ ರೂ., 10 ಲಕ್ಷ ರೂ. ಆದರೆ ಅದರಲ್ಲಿ ಅರ್ಧಕ್ಕಿಂತಲು ಹೆಚ್ಚು ಹಣವನ್ನು ಡೀಸೆಲ್‌, ಸೀಮೆಎಣ್ಣೆಗೆ ಕೊಡಬೇಕಾಗುತ್ತದೆ.

ಬಂಗುಡೆ ಸೀಸನ್‌
ಇದು ಬಂಗುಡೆ ಹೇರಳವಾಗಿ ಸಿಗುವ ಸೀಸನ್‌. ಕರಾವಳಿಯಿಂದ ಹೊರ ದೇಶಕ್ಕೆ ರಫ್ತಾಗುವ ಮೀನುಗಳಲ್ಲಿ ಬಂಗುಡೆ ಮೀನಿಗೆ ಭಾರೀ ಬೇಡಿಕೆಯಿದೆ. ಆದರೆ ಗಂಗೊಳ್ಳಿಯಲ್ಲಿ ಇನ್ನೂ ಕೂಡ ಬಂಗುಡೆ ಸಿಕ್ಕಿಯೇ ಇಲ್ಲ. ಋತು ಆರಂಭವಾದ ಮೊದಲ ಒಂದೆರಡು ದಿನ ಬಿಟ್ಟರೆ, ಆ ಬಳಿಕ ಈವರೆಗೆ ಬಂಗುಡೆ ಮೀನು ಸಿಕ್ಕಿಯೇ ಇಲ್ಲ. ಮಾತ್ರವಲ್ಲ ಗಂಗೊಳ್ಳಿಯಲ್ಲಿ ಹೆಚ್ಚಾಗಿ ಸಿಗುವ ಬೈಗೆ (ಬೂತಾಯಿ), ಅಂಜಲ್‌ ಕೂಡ ಸಿಗುತ್ತಿಲ್ಲ. ಇಲ್ಲಿ ಈಗ ಸಿಗುತ್ತಿರುವುದು ಟ್ಯೂನಾ (ಕೇದರ), ಕಾರ್ಗಿಲ್‌ ಮೀನುಗಳು ಮಾತ್ರ.

Advertisement

ಕಾರಣವೇನು?
ಮತ್ಸಕ್ಷಾಮಕ್ಕೆ ಪ್ರಮುಖವಾಗಿ ಮೀನಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು, ಹವಾಮಾನ ವೈಪರೀತ್ಯ, ಕಾರ್ಗಿಲ್‌, ಜೆಲ್ಲಿ ಫಿಶ್‌ಗಳ ಹಾವಳಿ ಕೂಡ ಕಾರಣವಾಗಿವೆ. ಬಂಗುಡೆ ಸಮುದ್ರದ ತಳದಲ್ಲಿದೆ. ಆದರೆ ಮೇಲೆ ಬರುತ್ತಿಲ್ಲ. ಇದರಿಂದ ಬೋಟು, ದೋಣಿಗಳ ಬಲೆಗೆ ಬೀಳುತ್ತಿಲ್ಲ. ಇನ್ನೂ ಕೆಲ ದಿನಗಳಲ್ಲಿಯಾದರೂ ಬರಬಹುದು ಎನ್ನುವ ಆಶಾಭಾವನೆಯಲ್ಲಿ ಮೀನುಗಾರರಿದ್ದಾರೆ.

ಆಶಾದಾಯಕ ಋತುವಲ್ಲ
ಮೀನುಗಾರಿಕೆ ಹೋಗಿದ್ದಕ್ಕಿಂತಲೂ ಮೀನು ಇಲ್ಲ ಅಂತ ದಡದಲ್ಲಿ ನಿಲ್ಲಿಸಿದ್ದೇ ಹೆಚ್ಚು. ಕಳೆದ ಕೆಲ ವರ್ಷಗಳಿಗಿಂತ ಈ ಬಾರಿಯೇ ಋತು ಇಷ್ಟೊಂದು ನಷ್ಟದಲ್ಲಿ ಆರಂಭವಾಗಿರುವುದು.
– ರಮೇಶ್‌ ಕುಂದರ್‌,
ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ, ಗಂಗೊಳ್ಳಿ

ಉತ್ತಮ ಮೀನುಗಳೇ ಸಿಕ್ಕಿಲ್ಲ
ಈ ಬಾರಿ ದೋಣಿಗಳಿಗೆ ಕನಿಷ್ಠ ಅರ್ಧದಷ್ಟು ಕೂಡ ಆದಾಯ ಬರಲಿಲ್ಲ. ಇದು ಉತ್ತಮ ಮೀನು ಸಿಗುವ ಸೀಸನ್‌ ಆಗಿದ್ದರೂ, ಇನ್ನೂ ಸರಿಯಾಗಿ ಉತ್ತಮ ಮೀನುಗಳೇ ಸಿಕ್ಕಿಲ್ಲ.
– ಮಂಜು ಬಿಲ್ಲವ, ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ, ಗಂಗೊಳ್ಳಿ

ಲೆಕ್ಕಾಚಾರ ಹೇಗಿದೆ?
ಈ ಎರಡು ತಿಂಗಳಲ್ಲಿ ಒಂದೊಂದು ಬೋಟುಗಳಿಗೆ ಕನಿಷ್ಠವೆಂದರೂ 25 ಲಕ್ಷ ರೂ. ಆದಾಯ ಬರಬೇಕಿತ್ತು. ಆದರೆ ಈವರೆಗೆ ಬೋಟುಗಳಿಗೆ ಸಾಮಾನ್ಯವಾಗಿ 3-4 ಲಕ್ಷ ರೂ. ಅಷ್ಟೇ ಆಗಿದೆ. ಹೆಚ್ಚೆಂದರೆ ಕೆಲವು ಬೋಟುಗಳಿಗೆ 8-10 ಲಕ್ಷ ರೂ. ಸಿಕ್ಕಿದೆ. ಅದರಲ್ಲಿ ಅವರು ಅರ್ಧಕ್ಕಿಂತಲೂ ಹೆಚ್ಚು ಡೀಸೆಲ್‌ಗೆ ವ್ಯಯಿಸಿದ್ದಾರೆ. ಇನ್ನೂ ದೋಣಿಗಳದ್ದು ಇದೇ ಸ್ಥಿತಿ. ನಾಡದೋಣಿ ಮೀನುಗಾರಿಕೆ ಆರಂಭವಾಗಿ 3 ತಿಂಗಳಾಗಿದ್ದು, ಈ ವರೆಗೆ ಕನಿಷ್ಠ ಒಂದು ದೋಣಿಗೆ 1 ಕೋ.ರೂ. ಆದರೂ ಆದಾಯ ಸಿಗಬೇಕಿತ್ತು. ಆದರೆ ಈವರೆಗೆ ಒಂದೊಂದು ದೋಣಿಗೆ ಹೆಚ್ಚೆಂದರೆ 25 ಲಕ್ಷ ರೂ. ಅಷ್ಟೇ ಆಗಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next