ಇದೊಂಥರ ಕ್ರಿಕೆಟ್‌ನಲ್ಲಿ ಗುಡ್‌ಲೆಂಗ್ ಬಾಲ್‌ಗೆ ಸಿಕ್ಸ್ ಹೊಡೆದಹಾಗೆ. ಬಾಲಿನ ವೇಗ, ಅದು ಬೀಳುವ ಜಾಗ, ಬ್ಯಾಟು ಬೀಸುವ ಟೈಮಿಂಗ್ ಕೊನೆಗೆ ಕ್ರೀಡಾಂಗಣದ ಉದ್ದ-ಅಗಲವೂ ಸಿಕ್ಸರ್ ಭಾರಿಸಲು ನೆರವಾಗಬೇಕಾಗುತ್ತದೆ.
ಇದು ಹೇಗಪ್ಪಾ ಅನ್ನಬೇಡಿ, ನಿಮ್ಮ ಬಳಿ ಸೈಟಿದೆ. ಅದನ್ನು ಮಾರಿ ಒಳ್ಳೇ ಕಡೆ ವರ್ಷಕ್ಕೆ ನಾಲ್ಕೈದು ಲಕ್ಷ ಏರುವ ಕಡೆ ಮತ್ತೂಂದು ಸೈಟು ಕೊಳ್ಳಬೇಕು ಎಂಬ ಯೋಚನೆ ಇದೆ ಅಂದುಕೊಳ್ಳಿ. ಇಂಥ ಸಂದರ್ಭದಲ್ಲಿ, ಮೊದಲು ಕೈಯಲ್ಲಿರುವ ಸೈಟು ಮಾರಬೇಕೋ ಅಥವಾ ಕೊಳ್ಳಬೇಕಿರುವ ಸೈಟು ಹುಡುಕಬೇಕೋ?ಈ ಗೊಂದಲ ಎದುರಾಗುತ್ತದೆ.
Advertisement
ಏಕೆಂದರೆ, ಒಂದು ಪಕ್ಷ ಕೈಯಲ್ಲಿರುವ ಸೈಟು ಮಾರಿ, ಆ ಬೆಲೆಗೆ ನಿಮಗೆ ಇನ್ನೊಂದು ಕಡೆ ಸೈಟು ಸಿಗದೇ ಹೋದರೆ, ಇರುವ ಸೈಟನ್ನೂ ಕಳೆದುಕೊಂಡಾತಾಗುತ್ತದೆ. ದಿನೇ ದಿನೆ ಮಾರಿದ ಹಣದ ಬೆಲೆ ಇಳಿಯುತ್ತಾ ಹೋಗುತ್ತದೆ ಅನ್ನೋ ಆತಂಕ. ಒಂದು ಪಕ್ಷ ಮಾರುವ ಮೊದಲೇ ಕೊಳ್ಳಬೇಕಾದ ಸೈಟು ಸಿಕ್ಕಿಬಿಟ್ಟರೆ- ಇದನ್ನು ಮಾರಿ, ಅದನ್ನು ಕೊಳ್ಳುವ ಹೊತ್ತಿಗೆ ಆ ಸೈಟೂ ಕೈ ತಪ್ಪಬಹುದು. ಇಂಥ ಪ್ರಾಕ್ಟಿಕಲ್ ಸಮಸ್ಯೆಗಳು ಎದುರಾಗುತ್ತವೆ. ಇಂಥ ಸಂದರ್ಭದಲ್ಲಿ “ಕ್ರಿಟಿಕಕಲ್’ ತೀರ್ಮಾನವೇ ತೆಗೆದು ಕೊಳ್ಳಬೇಕಾಗುತ್ತದೆ. ಮಾರುವ ಮತ್ತು ಕೊಳ್ಳುವುದರ ನಡುವೆ ಹಣವನ್ನು ಇಟ್ಟುಕೊಂಡು ತಂತಿಯ ಮೇಲಿನ ನಡಿಗೆ ಮಾಡಿ, ಹೂಡಿಕೆ ಮಾಡುವುದಕ್ಕೆ ಬರೀ ತಂತ್ರಗಾರಿಕೆ ಮಾತ್ರವಲ್ಲ, ಅದೃಷ್ಟವೂ ಇರಬೇಕು. ಇತ್ತ ಮಾರಿ, ಅತ್ತ ಕೊಳ್ಳುವುದಕ್ಕೆ ಚಾಕಚಕ್ಯತೆ ಬೇಕಾಗುತ್ತದೆ. ಇದು ಕೇವಲ ಸೈಟಿನ ವಿಷಯ ಮಾತ್ರವಲ್ಲ. ಇದರ ಜಾಗದಲ್ಲಿ ಷೇರು, ಬಂಗಾರ ಯಾವುದನ್ನು ಬೇಕಾದರೂ ಇಟ್ಟು ನೋಡಿ. ಎಲ್ಲದರ ಸಾಮಾನ್ಯ ಗೊಂದಲ ಇದೇ.
ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ಹುಡುಕಿದಂತೆಯೇ ರಿಯಲ್ ಎಸ್ಟೇಟ್‌ನಲ್ಲಿ ಈಗ ನಂಬಿಕೆಯನ್ನು ಹುಡುಕುವ ಪರಿಸ್ಥಿತಿ ಇದೆ. ಹೀಗಾಗಿ, ನಮ್ಮ ಹೂಡಿಕೆಯ ಹಣವನ್ನು ಯಾವುದಾದರೊಂದು ರೀತಿಯಲ್ಲಿ ಲಪಟಾಯಿಸುವವರಂ ಹೆಚ್ಚಿರುವುದರಿಂದ ಅತಿ ಎಚ್ಚರಿಕೆಯಿಂದಲೇ ಹೂಡಿಕೆ ಮಾಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ. ಅದಕ್ಕೆ ಒಂದು ಐಡಿಯಾ ಮಾಡಬಹುದು. ಅದುವೇ ಗುಂಪು ಹೂಡಿಕೆ. ಹೀಗೆ ಮಾಡಿದರೆ ಲಾಭ ಹೆಚ್ಚು. ಅಂದರೆ 10 ಎಕರೆ ಜಮೀನನ್ನು ಒಟ್ಟಾರೆ ನಾಲ್ಕು ಐದು ಜನ ಸೇರಿ ಕೊಂಡರೆ ಒಬ್ಬೊಬ್ಬರಿಗೆ ತಲಾ ಎರಡೂವರೆ ಎಕರೆ ಜಾಗ ಸಿಗುತ್ತದೆ. ಹೀಗೆ ಕೊಂಡರೆ ಬೆಲೆ ಕಡಿಮೆಯಾಗುತ್ತದೆ. ನಾಲ್ಕೂ ಜನರಲ್ಲಿ ಒಬ್ಬರು ಒಂದೊಂದು ವೀಕೆಂಡ್ ಹೋಗಿ ಜಮೀನು ನೋಡಿಕೊಳ್ಳಬಹುದು ಅಥವಾ ಎಲ್ಲರೂ ಸೇರಿ, ಆ ಜಾಗದಲ್ಲಿ ಸೇರಿ ಸೈಟುಗಳನ್ನು ಮಾಡಬಹುದು.
ಒಂದು ಪಕ್ಷ ವೀಕೆಂಡ್‌ಗಾಗಿ ಜಾಗವನ್ನೇ ಇಟ್ಟುಕೊಳ್ಳುತ್ತೇವೆ. ರೇಟು ಬಂದಾಗ ಮಾರುತ್ತೇವೆ ಅಂದರೆ ಇನ್ನೂ ಒಳ್ಳೆಯದು. ನಾಲ್ಕು ಎಕರೆ ಜಾಗದಲ್ಲಿ ಅರ್ಧ ಎಕರೆಯನ್ನು ಓಡಾಡಲು ಜಾಗಬಿಟ್ಟರೆ ಎಲ್ಲರಿಗೂ ದಾರಿಸಿಕ್ಕಂತಾಗಿ ಮುಂದೆ ಹೂಡಿಕೆಯ ಲಾಭ ಹೆಚ್ಚಾಗುತ್ತದೆ. ಇದೇನೂ ಬೇಡ ಎನಿಸಿದರೆ ಪ್ರತ್ಯೇಕವಾಗಿ ಮಾರಾಟ ಮಾಡಬಹುದು. ಹೀಗೆ, ಸಮಾನ ಮನಸ್ಕರು ಸೇರಿ ಕೊಂಡರೆ ಕಡಿಮೆ ಬೆಲೆಗೆ ಭೂಮಿ ಸಿಕ್ಕಂತಾಗುತ್ತದೆ. ಕೊಳ್ಳುವಾಗ ಎದುರಾಗುವ ದಾಖಲೆ ಪರಿಶೀಲನೆಗೂ ನೆರವಾಗುತ್ತದೆ. ಕೃಷಿ ಭೂಮಿ ಮಾರುವ ಕಂಪೆನಿಗಳು ಮಾಡುತ್ತಿರುವುದು ಇದನ್ನೇ. ಒಂದಷ್ಟು ಎಕರೆ ಜಮೀನು ಕೊಂಡು ಮಾರುತ್ತಿವೆ. ಇದೇ ಕಾಯಕವನ್ನು ಸ್ನೇಹಿತರೋ, ಸಂಬಂಧಿಕರ ಸೇರಿ ಮಾಡಿದರೆ ಲಾಭ ಹೆಚ್ಚು.
Related Articles
– ನೀವು ಕೊಳ್ಳುವ ಸೈಟು, ಜಮೀನಿನ ದಾಖಲೆ ಸರಿ ಇದೆಯೇ ನೋಡಿಕೊಳ್ಳಿ. ಆಮೇಲೆ ಮುಂಗಡ ಹಣ ಕೊಡುವುದು ಲೇಸು.
– ಕನಿಷ್ಠ 30 ವರ್ಷ, ಗರಿಷ್ಠ 50 ವರ್ಷದ ದಾಖಲೆಗಳನ್ನು ಪರಿಶೀಲಿಸಿ.
– ಆದಷ್ಟು ಕಡಿಮೆ ವಹಿವಾಟು ಅಂದರೆ, ಮೂರು ಅಥವಾ ನಾಲ್ಕು ಕೈ ಬದಲಾಗಿರುವ ಭೂಮಿ ಕೊಳ್ಳಿ.
ಹೆಚ್ಚೆಚ್ಚೆ ಜನ ಕೊಂಡಿದ್ದರೆ ದಾಖಲೆ ಪರಿಶೀಲನೆ ಕೂಡ ಕಷ್ಟವಾಗುತ್ತದೆ.
– ಸೈಟು, ಜಮೀನಿನ ಮೂಲ ದಾಖಲೆ ಅಂದರೆ ಅದನ್ನು ಮಾಲೀಕರು ಯಾವ ರೀತಿ ಪಡೆದರು, ಜಮೀನಿನ ಮೂಲ ವಾರಸುದಾರರು ಯಾರು ಎಂಬುದನ್ನು ವಿವರಿಸುವ ಮದರ್‌ಡೀಡ್ ಖಂಡಿತ ಇರಬೇಕು.
– ಪ್ರಸ್ತುತ ಮಾಲೀಕರಿಗೆ ಎಷ್ಟು ಜನ ಮಕ್ಕಳು, ನೀವು ಖರೀದಿಸುತ್ತಿರುವ ಜಮೀನು ಅವರ ಪಿತ್ರಾರ್ಜಿತವೋ, ಸ್ವಯಾರ್ಜಿತ ಆಸ್ತಿಯೋ ಖಚಿತಮಾಡಿಕೊಳ್ಳಿ.
– ಭೂಮಿ ಕೊಂಡಾಕ್ಷಣ ಅದರಲ್ಲಿ ಕೃಷಿ ಮಾಡುವ ಹವ್ಯಾಸ ರೂಢಿಸಿಕೊಳ್ಳಿ. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಹಾಕಿ. ಕಾಫಿ, ಅಡಿಕೆ ಬೆಳೆದರೆ ಲಾಭ ಸಿಗುತ್ತದೆ. ಅಡಿಕೆಯಿಂದ ವರ್ಷಕ್ಕೆ ಎಕರೆಗೆ ಕನಿಷ್ಠ ಒಂದು ಲಕ್ಷ ಲಾಭ ಸಿಗಬಹುದು. ಹೀಗೆ ಹೂಡಿಕೆ ಮಾಡುವುದರಿಂದ ಉಪಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಭೂಮಿಯ ಬೆಲೆ ಕೂಡ ಹೆಚ್ಚಾಗುತ್ತದೆ.
Advertisement
ಕಟ್ಟೆ