Advertisement

ಚೇತರಿಕೆ ಕಂಡಿದ್ದ ರಿಯಲ್‌ಎಸ್ಟೇಟ್‌ ಕ್ಷೇತ್ರಕ್ಕೆ ಮತ್ತೆ ಹೊಡೆತ

11:19 AM May 25, 2021 | Team Udayavani |

ಮಹಾನಗರ: ಚೇತರಿಕೆ ಕಂಡು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದ ರಿಯಲ್‌ಎಸ್ಟೇಟ್‌ ಕ್ಷೇತ್ರಕ್ಕೆ ಇದೀಗ ಕೊರೊನಾ ಎರಡನೇ ಅಲೆ ಮತ್ತೆ ಹೊಡೆತವನ್ನು ನೀಡಿದೆ. ನಿರ್ಮಾಣ ಚಟುವಟಿಕೆಗಳು ಮುಂದು ವರಿದಿದ್ದರೂ ಕೊರೊನಾ ನಿರ್ಮಿಸಿರುವ ಅನಿಶ್ಚಿತತೆ ಮನೆ, ಆಸ್ತಿಗಳ ಖರೀದಿಯ ಮೇಲೆ ಪರಿಣಾಮ ಬೀರಿದೆ.

Advertisement

ಕಳೆದ ವರ್ಷ ಲಾಕ್‌ಡೌನ್‌ನ ಬಳಿಕ ನವೆಂಬರ್‌ ತಿಂಗಳಿನಿಂದ ಚೇತರಿಕೆ ಕಂಡಿದ್ದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಈವರ್ಷದ ಎಪ್ರಿಲ್‌ವರೆಗೆ ಉತ್ತಮ ಸ್ಥಿತಿಯಲ್ಲಿ ಸಾಗುತ್ತಿತ್ತು. ಫ್ಲ್ಯಾಟ್‌ಗಳಿಗೆ ಬೇಡಿಕೆಯ ಟ್ರೆಂಡ್‌ ಸೃಷ್ಟಿಯಾಗಿತ್ತು. ಹೊರ ದೇಶಗಳಿಂದ, ಹೊರ ರಾಜ್ಯಗಳಿಂದ ಬಂದವರಿಂದ ಮತ್ತು ಹೊರದೇಶಗಳಲ್ಲಿ ಇರುವ ಮಂಗಳೂರಿನ ನಿವಾಸಿಗಳು ಫ್ಲಾಟ್‌ ಖರೀದಿ ಬಗ್ಗೆ ಆಸಕ್ತಿ ತೋರಿದ ಪರಿಣಾಮ ಖರೀದಿ, ವಿಚಾರಣೆ ಜಾಸ್ತಿಯಾಗಿತ್ತು. ದ.ಕ. ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ವಸತಿ, ವಾಣಿಜ್ಯ ಸಂಕೀರ್ಣ ಯೋಜನೆಗಳು ನಿರ್ಮಾಣದ ಹಂತದಲ್ಲಿವೆ. ಪ್ರಸ್ತುತ ಇರುವ ಲಾಕ್‌ಡೌನ್‌ನಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿ ಇರುವ ಹಿನ್ನೆಲೆಯಲ್ಲಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಚಟುವಟಿಕೆಗಳು ಸಾಗುತ್ತಿವೆ.

ಕೊರೊನಾ ಎರಡನೇ ಅಲೆಯ ತೀವ್ರತೆ ಹಾಗೂ ಇನ್ನು ಕೆಲವೇ ತಿಂಗಳುಗಳಲ್ಲಿ ಮೂರನೇ ಅಲೆ ಎದುರಾಗಲಿದೆ ಎಂಬ ವರದಿಗಳು ಅನಿಶ್ಚಿತತೆಯ ಪರಿಸ್ಥಿತಿಯನ್ನು ಹುಟ್ಟುಹಾಕಿದ್ದು, ಒಟ್ಟು ಮಾರುಕಟ್ಟೆ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆಯನ್ನು ಮಾಡಲು ಜನರು ಹಿಂಜರಿಯುತ್ತಿದ್ದು, ಇದು ರಿಯಲ್‌ಎಸ್ಟೇಟ್‌ ಕ್ಷೇತ್ರದಲ್ಲೂ ಪರಿಣಾಮ ಬೀರಿದೆ.

ನೋಂದಣಿ ಸ್ಥಗಿತದಿಂದ ಹಿನ್ನಡೆ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ದ.ಕ. ಜಿಲ್ಲೆಯಲ್ಲಿ 9 ಮತ್ತು ಉಡುಪಿ ಜಿಲ್ಲೆಯಲ್ಲಿ 7 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿದ್ದು ಆಸ್ತಿ, ಫ್ಲಾ Âಟ್‌, ಅಂಗಡಿ ಕಟ್ಟಡಗಳ ಖರೀದಿ, ಮಾರಾಟ ನೋಂದಣಿ ಪ್ರಕ್ರಿಯೆ ಪ್ರಸ್ತುತ ಸ್ಥಗಿತಗೊಂಡಿದೆ. ದ.ಕ. ಜಿಲ್ಲೆಯೊಂದರಲ್ಲೇ ದಿನವೊಂದಕ್ಕೆ ವಿವಿಧ ರೀತಿಯ ಸುಮಾರು 150ರಿಂದ 200 ನೋಂದಣಿಗಳು ನಡೆಯುತ್ತಿದ್ದವು. ಉಭಯ ಜಿಲ್ಲೆಗಳಿಂದ ಪ್ರತಿದಿನ ಸುಮಾರು 1.5 ಕೋಟಿ ರೂ. ಸರಕಾರ ಬೊಕ್ಕಸಕ್ಕೂ ಆದಾಯ ಸಂದಾಯವಾಗುತ್ತಿತ್ತು. ಇದೀಗ ಕಚೇರಿ ಸ್ಥಗಿತಗೊಂಡಿರುವುದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಆಸ್ತಿ ನೋಂದಣಿ, ಮಾರಾಟ ಪ್ರಕ್ರಿಯೆಗಳು ಸರಾಗವಾಗಿ ನಡೆದರೆ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೂ ಆದಾಯ ಬರುತ್ತದೆ.

ಹಿನ್ನಡೆಯಾಗಿದೆ
ರಿಯಲ್‌ ಎಸ್ಟೇಟ್‌ ಕ್ಷೇತ್ರ ಚೇತರಿಕೆ ಕಂಡು ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿರುವ ಸಂದರ್ಭದಲ್ಲೇ ಎದುರಾಗಿರುವ ಕೊರೊನಾ ಎರಡನೇ ಈ ಕ್ಷೇತ್ರದ ಮೇಲೆ ಹೊಡೆತ ನೀಡಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯನ್ನು ಸಂಪೂರ್ಣ ಬಂದ್‌ ಮಾಡುವ ಬದಲು ಬ್ಯಾಂಕ್‌ಗಳಂತೆ ದಿನದ ನಿರ್ದಿಷ್ಟ ತಾಸುಗಳವರೆಗೆ ಮಾರ್ಗಸೂಚಿಗಳನ್ನು ಅಳವಡಿಸಿ ಕಾರ್ಯಾಚರಿಸಲು ಅನುವು ಮಾಡಿಕೊಡಬೇಕು. ಇದರಿಂದ ನಿರ್ಮಾಣ ಕ್ಷೇತ್ರಕ್ಕೆ ಮಾತ್ರವಲ್ಲ ಸರಕಾರಕ್ಕೂ ಆದಾಯ ಬರುತ್ತದೆ. ಈ ಬಗ್ಗೆ ಸರಕಾರವನ್ನು ಆಗ್ರಹಿಸಲಾಗುವುದು.
-ಪುಷ್ಪರಾಜ ಜೈನ್‌, ಅಧ್ಯಕ್ಷರು, ಕ್ರೆಡೈ ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next