ತೀರ್ಥಹಳ್ಳಿ: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರಿಗಾಗಿ ನಾಯಿಯೊಂದು ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊವೊಂದು ವೈರಲ್ ಆಗಿದೆ.
ಇದು ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನೆನಪಿಸುತ್ತಿದೆ. ಅಷ್ಟೆ ಅಲ್ಲ, ಈಗ ಇಡೀ ಪಟ್ಟಣದ ಜನ ಈ ಶ್ವಾನಕ್ಕೆ ಚಾರ್ಲಿ ಎಂದು ಕರೆಯುತ್ತಿದ್ದಾರೆ.
ಆಸ್ಪತ್ರೆ ಬಾಗಿಲಲ್ಲೇ ಮೊಕ್ಕಾಂ: ಪಟ್ಟಣದ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್ ಅವರು ಮನೆಯಲ್ಲಿ ನಾಯಿ ಸಾಕಿದ್ದಾರೆ. 8 ತಿಂಗಳ ಈ ನಾಯಿಯ ಹೆಸರು ʼಪಪ್ಪಿʼ. ನಾಗರತ್ನ ಶಾಸ್ತ್ರಿಯವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಟ್ಟಣದ ಆಸ್ಪತ್ರೆಯೊಂದರಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ಪಪ್ಪಿ, ಆಸ್ಪತ್ರೆ ಬಾಗಿಲಲ್ಲಿ ಮೊಕ್ಕಾಂ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಇತರ ಸಾರ್ವಜನಿಕರಿಗೆ ಪಪ್ಪಿ ಯಾವುದೇ ತೊಂದರೆ ಕೊಟ್ಟಿಲ್ಲ. ಆದರೆ ಹೆಚ್ಚು ಹೊತ್ತು ಆಸ್ಪತ್ರೆ ಬಾಗಿಲಲ್ಲೆ ಕಾದು ಕುಳಿತಿರುತ್ತಿತ್ತು ಎನ್ನುತ್ತಾರೆ ಅಲ್ಲಿನ ಸ್ಥಳೀಯರು.
ವಾರ್ಡ್ ಕಡೆಗೆ ಗಮನ: ಆಸ್ಪತ್ರೆ ಬಾಗಿಲಲ್ಲೇ ನಿಲ್ಲುತ್ತಿದ್ದ ಪಪ್ಪಿ, ನಾಗರತ್ನ ಶಾಸ್ತ್ರಿಯವರನ್ನು ಕರೆದೊಯ್ದು ದಾಖಲು ಮಾಡಿದ್ದ ವಾರ್ಡ್ ಕಡೆಗೆ ದೃಷ್ಟಿ ನೆಟ್ಟಿರುತ್ತಿತ್ತು. ಬೇರೆ ಯಾರೆ ಬಂದು ಮಾತನಾಡಿಸಿದರೂ ಸೌಮ್ಯವಾಗಿಯೇ ಪ್ರತಿಕ್ರಿಯಿಸುತ್ತಿತ್ತು. ಆ ಬಳಿಕ ಪುನಃ ವಾರ್ಡ್ ಕಡೆಗೆ ಕಣ್ಣು ನೆಟ್ಟು ಕಾದು ನಿಲ್ಲುತ್ತಿತ್ತು. ನಾಗರತ್ನ ಶಾಸ್ತ್ರಿಯವರು ಆಸ್ಪ್ರೆಯಿಂದ ಡಿಸ್ಚಾರ್ಜ್ ಆದಾಗ, ಆಂಬುಲೆನ್ಸ್ ಬಳಿ ಕುಣಿದಾಡಿತ್ತು ಅನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ಒಂದೂವರೆ ತಿಂಗಳಿದ್ದಾಗ ಅದನ್ನು ಮನೆಗೆ ತಂದಿದ್ದು, ಪಪ್ಪಿ ಎಂದು ಕರೆಯುತ್ತೇವೆ. ಈಗ ಅದಕ್ಕೆ 8 ತಿಂಗಳು. ನಮ್ಮ ತಾಯಿಗೆ ವಯಸ್ಸಾಗಿದೆ. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಮ್ಮ ಜೊತೆಗೆ ಬಂದು ಆಸ್ಪತ್ರೆ ಮುಂದೆ ನಿಲ್ಲುತ್ತಿತ್ತು. ʼಅಲ್ಲಿಗೆ ಬರುವ ಎಲ್ಲರಿಗೂ ಅದು ನಮ್ಮ ಮನೆ ನಾಯಿ ಎಂದು ಗೊತ್ತಾಗಿ ಹೋಗಿದೆʼ ಎನ್ನುತ್ತಾರೆ ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್.
ಆಹಾರ ತಿನ್ನದೇ ಕುಳಿತಿದ್ದ ಪಪ್ಪಿ: ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗರತ್ನ ಶಾಸ್ತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕೊನೆಯುಸಿರೆಳೆದಿದ್ದಾರೆ. ಅಂದಿನಿಂದಲೂ ಪಪ್ಪಿ ಆಹಾರ ಸೇವಿಸದೆ ಸುಮ್ಮನೆ ಕುಳಿತಿರುತ್ತಿದ್ದು, ನಮ್ಮ ಮನೆಯಲ್ಲಿ ಯಾರಿಗಾದರು ಆರೋಗ್ಯ ಸಮಸ್ಯೆಯಾದರು ಅದಕ್ಕೆ ಗೊತ್ತಾಗುತ್ತದೆ. ಆಗ ಅದು ಕೂಡ ಮಂಕಾಇ ಕೂತಿರುತ್ತದೆ ಎನ್ನುತ್ತಾರೆ ಸುಧಾ ಜೋಯಿಸ್.
ಪಪ್ಪಿ ಚಾರ್ಲಿ ಆಯಿತು: ಸುಧಾ ಜೋಯಿಸ್ ಅವರ ಮನೆಯ ಪಪ್ಪಿಗೆ ಈಗ ಪಟ್ಟಣದ ಜನರು ಚಾರ್ಲಿ ಎಂದು ಕರೆಯಲು ಆರಂಭಿಸಿದ್ದಾರೆ. ಚಾರ್ಲಿ ಸಿನಿಮಾದ ನಾಯಿಯಂತೆಯೆ ಬಣ್ಣ, ಅದರಂತೆಯೇ ಹೊಂದಾಣಿಕೆ, ಹೇಳಿದ್ದು ಕೇಳುವ ಸ್ವಭಾವ ಕಂಡು ಜನರು ಚಾರ್ಲಿ ಎಂದು ಕರೆಯುತ್ತಿದ್ದಾರಂತೆ.