ಅಲ್ಲಿ ಬೆರಳೆಣಿಕೆ ಮಂದಿ ಬಿಟ್ಟರೆ ಉಳಿದವರೆಲ್ಲರೂ ‘ಲುಂಗಿ’ ಧರಿಸಿ ಬಂದವರು! ಎಲ್ಲರೂ ಒಟ್ಟಿಗೆ ವೇದಿಕೆ ಏರಿ, ಹಾಗೊಂದು ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ಕೊಟ್ಟರು…!
– ಇದನ್ನು ಓದಿದ ಮೇಲೆ ಅದು ಜನಪದ ಕಾರ್ಯಕ್ರಮ ಇರಬಹುದು ಅಂದುಕೊಂಡರೆ, ಆ ಊಹೆ ತಪ್ಪು. ಅದು ‘ಲುಂಗಿ’ ವಿಶೇಷ. ಹಾಗಾಗಿ ಬಹುತೇಕರು ಅಂದು ಕಲರ್‌ಫುಲ್ ‘ಲುಂಗಿ’ಗೆ ಮೊರೆ ಹೋಗಿದ್ದರು. ವಿಷಯವಿಷ್ಟೇ, ಬಹುತೇಕ ಮಂಗಳೂರು ಭಾಗದವರೇ ಸೇರಿ ಮಾಡಿರುವ ಹೊಸ ಚಿತ್ರದ ಹೆಸರು ಇದು. ‘ಲುಂಗಿ’ ಈಗ ಬಿಡುಗಡೆಗೆ ಸಜ್ಜಾಗಿದೆ. ತುಳು ಸಿನಿಮಾ ಮೂಲಕ ಸದ್ದು ಮಾಡಿದ ತಂಡ ಈಗ ಅಪ್ಪಟ ಕನ್ನಡ ಸಿನಿಮಾ ‘ಲುಂಗಿ’ ಮೂಲಕ ಗಾಂಧಿನಗರ ಪ್ರವೇಶಿಸಿದೆ. ‘ಲುಂಗಿ’ ಅನ್ನೋದು ‘ಪ್ರೀತಿ, ಸಂಸ್ಕೃತಿ, ಸೌಂದರ್ಯ’ ಒಳಗೊಂಡ ವಸ್ತ್ರ. ಈ ಮೂರು ಅಂಶಗಳು ‘ಲುಂಗಿ’ ಚಿತ್ರದ ಹೈಲೈಟ್. ಹೌದು, ಇದೊಂದು ‘ರೆಡಿಮೇಡ್ ಲವ್‌ಸ್ಟೋರಿ’ ಎನ್ನುತ್ತದೆ ಚಿತ್ರತಂಡ. ಈ ಚಿತ್ರದ ಮೂಲಕ ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಮತ್ತು ತಂತ್ರಜ್ಞರು ಕನ್ನಡಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಿನಿಮಾ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ನಿರ್ಮಾಪಕರು.
ಮುಖೇಶ್ ಹೆಗ್ಡೆ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಕನ್ನಡ ಚಿತ್ರ. ಈ ಹಿಂದೆ ಎರಡು ಯಶಸ್ವಿ ತುಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಉದ್ದೇಶದಿಂದ ಮುಖೇಶ್ ಹೆಗ್ಡೆ, ‘ಲುಂಗಿ’ ಚಿತ್ರಕ್ಕೆ ಹಣ ಹಾಕಿದ್ದಾರೆ. ಆ ಕುರಿತು ಹೇಳುವ ಮುಖೇಶ್ ಹೆಗ್ಡೆ, ‘ಇದೊಂದು ಹೊಸಬರ ಹೊಸ ಪ್ರಯತ್ನ. ಇಬ್ಬರು ಪ್ರತಿಭಾವಂತ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯ್ತು. ನನ್ನ ಪುತ್ರ ಪ್ರಣವ್ ಹೆಗ್ಡೆಗೂ ಸಿನಿಮಾ ಆಸಕ್ತಿ ಇತ್ತು. ತರಬೇತಿ ಕೊಡಿಸಿ ತಯಾರು ಮಾಡಿದ್ದೆ. ಈ ಕಥೆ, ಪಾತ್ರ ಸೂಕ್ತವೆನಿಸಿದ್ದರಿಂದ ನಿರ್ದೇಶಕರು ಒಮ್ಮೆ ಪ್ರಣವ್ ಅವರನ್ನು ನೋಡಿ, ‘ಲುಂಗಿ’ಗೆ ಹೀರೋ ಮಾಡಿದರು. ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ಅಕ್ಟೋಬರ್ 11 ರಂದು ತೆರೆಗೆ ಬರಲಿದೆ’ ಎಂದು ವಿವರ ಕೊಟ್ಟರು ಮುಖೇಶ್ ಹೆಗ್ಡೆ.
ಚಿತ್ರಕ್ಕೆ ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ಇಬ್ಬರು ನಿರ್ದೇಶಕರು. ಈ ಪೈಕಿ ಅರ್ಜುನ್ ಲೂಯಿಸ್ ‘ಲುಂಗಿ’ ಕುರಿತು ಹೇಳಿದ್ದು ಹೀಗೆ. ‘ಇದು ಮೊದಲ ಅನುಭವ. ನಿರ್ಮಾಪಕರು ನಮ್ಮನ್ನು ನಂಬಿ ಅವಕಾಶ ಕೊಟ್ಟಿದ್ದಾರೆ. ಯಾವುದಕ್ಕೂ ಕಮ್ಮಿ ಇಲ್ಲದಂತೆ ನಿರ್ಮಾಣ ಮಾಡಿದ್ದಾರೆ. ಹೊಸಬರಿಗೆ ಇಂತಹ ನಿರ್ಮಾಪಕರು ಸಿಗಬೇಕು. ಇದೊಂದು ಮುದ್ದಾದ ಲವ್‌ಸ್ಟೋರಿ ಹೊಂದಿದೆ. ಇಲ್ಲಿ ಎಲ್ಲವೂ ಇದೆ. ಅದರಲ್ಲೂ ಮಂಗಳೂರು ಭಾಷೆ ಚಿತ್ರದ ಹೈಲೈಟ್‌ಗಳಲ್ಲೊಂದು’ ಎಂದು ಹೇಳಿದ ಅವರ ಮಾತಿಗೆ ನಿರ್ದೇಶಕ ಗೆಳೆಯ ಅಕ್ಷಿತ್ ಶೆಟ್ಟಿ ಧ್ವನಿಯಾದರು.
ನಾಯಕ ಪ್ರಣವ್ ಹೆಗ್ಡೆ ಸಿನಿಮಾಗೆ ಬರುವ ಮುನ್ನ ರಂಗಾಯಣದಲ್ಲಿ ತರಬೇತಿ ಪಡೆದಿದ್ದಾರೆ. ‘ಒಂದೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಇದು ಈಗಿನ ಯೂಥ್‌ಗೆ ಇಷ್ಟವಾಗುವಂತಹ, ಸಣ್ಣದ್ದೊಂದು ಸಂದೇಶ ಇರುವಂತಹ ಚಿತ್ರ. ಹೊಸ ತಂಡವನ್ನು ಪ್ರೋತ್ಸಾಹಿಸಿ ಬೆಳೆಸಬೇಕು’ ಎಂಬುದು ಪ್ರಣವ್ ಹೆಗ್ಡೆ ಮಾತು.
ನಾಯಕಿ ರಾಧಿಕಾ ರಾವ್‌ಗೆ ಇದು ಮೊದಲ ಕನ್ನಡ ಚಿತ್ರ. ಹಿಂದೆ ತುಳು ಸಿನಿಮಾ ಮಾಡಿದ್ದಾರೆ. ತಮ್ಮ ಪಾತ್ರ ಕುರಿತ ಅನುಭವ ಹಂಚಿಕೊಂಡರು. ಇನ್ನು, ಅಂದಿನ ಆಕರ್ಷಣೆ ನಟ ರಕ್ಷಿತ್ ಶೆಟ್ಟಿ. ಅವರು ಹೊಸಬರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. ಅಂದು ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ , ಛಾಯಾಗ್ರಾಹಕ ರಿಜೋ ಪಿ.ಜಾನ್, ಸಂಕಲನಕಾರ ಮನು, ತುಳು ರಂಗಭೂಮಿ ಕಲಾವಿದೆ ರೂಪ ವಾರ್ಕಡೆ, ರಂಜಿತ್‌ಶೆಟ್ಟಿ ಇತರರು ಇದ್ದರು.