Advertisement

ರಾಹುಲ್‌ ಸ್ವಾಗತಕ್ಕೆ ಸಿದ್ಧತೆ: ಸಚಿವ ರೈ

05:01 PM Mar 16, 2018 | Team Udayavani |

ಬೆಳ್ತಂಗಡಿ: ಜನಾಶೀರ್ವಾದ ಯಾತ್ರೆ ನಡೆಸಲು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಮಾ. 20ರಂದು ಜಿಲ್ಲೆಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯ ವಿವಿಧೆಡೆ ರೋಡ್‌ ಶೋ ನಡೆಸಿದ ಬಳಿಕ ಮಂಗಳೂರಿನ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸಚಿವ ರಮಾನಾಥ ರೈ ಹೇಳಿದರು.

Advertisement

ಅವರು ಗುರುವಾರ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಹುಲ್‌ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪಡುಬಿದಿರೆಯಲ್ಲಿ ಸೇವಾದಳ ಕಟ್ಟಡ ಉದ್ಘಾಟಿಸಿ ರೋಡ್‌ಶೋ ನಡೆಸಲಿದ್ದಾರೆ. ಬಳಿಕ ಸುರತ್ಕಲ್‌, ಅಂಬೇಡ್ಕರ್‌ ವೃತ್ತ ಮೊದಲಾದೆಡೆ ರೋಡ್‌ ಶೋ ನಡೆಯಲಿದೆ. ರಾಹುಲ್‌ ಗಾಂಧಿ ಅವರನ್ನು ಕಾಂಗ್ರೆಸ್‌ನ ವಿವಿಧ ಘಟಕಗಳು ರಸ್ತೆಯುದ್ದಕ್ಕೂ ವಿವಿಧ ಭಾಗಗಳಲ್ಲಿ ಸ್ವಾಗತಿಸಲಿವೆ ಎಂದರು.

ಉತ್ತರಾಭಿಮುಖ ವೇದಿಕೆ
ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬದಿಂದ ರಾಹುಲ್‌ ಗಾಂಧಿ ಬಂದಿದ್ದಾರೆ. ನೆಹರೂ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಹಿಂದೆ ಮಂಗಳೂರು ನೆಹರೂ ಮೈದಾನದ ಫುಟ್ಬಾಲ್‌ ಅಂಗಣದಲ್ಲಿ ದಕ್ಷಿಣಾಭಿಮುಖವಾಗಿ ವೇದಿಕೆ ಹಾಕಲಾಗುತ್ತಿತ್ತು. ಈ ಬಾರಿ ಮೊದಲ ಬಾರಿಗೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಉತ್ತರಾಭಿಮುಖವಾಗಿ ವೇದಿಕೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೇಶದ ಗಮನ ಸೆಳೆದಿದೆ ಕರಾವಳಿ
ನೈತಿಕ ಪೊಲೀಸ್‌ ಗಿರಿ, ಹತ್ಯೆ, ಚರ್ಚ್‌ಗಳ ಮೇಲಿನ ದಾಳಿ, ಪಬ್‌ ದಾಳಿ ಮೊದಲಾದವುಗಳಿಂದ ಕರಾವಳಿ ದೇಶದ ಗಮನ ಸೆಳೆದಿದೆ. ಮತೀಯ ಸಂಘಟನೆಗಳನ್ನು ದೂರ ಮಾಡುವುದಕ್ಕಾಗಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸ್ಫೂರ್ತಿ ತುಂಬುವುದಕ್ಕೆ ರಾಹುಲ್‌ ಗಾಂಧಿ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಬಿಜೆಪಿ ವಿರುದ್ಧ ಟೀಕೆ
ಮೋದಿ ನೇತೃತ್ವದ ಸರಕಾರ ಜನರಿಗೆ ಸುಳ್ಳು ಭರವಸೆ ನೀಡಿ, ಜನರನ್ನು ಮೋಸಗೊಳಿಸುತ್ತಿದೆ. ಅಧಿಕಾರ ವಹಿಸಿ ಇಷ್ಟು ಸಮಯ ಕಳೆದರೂ ಲೋಕಪಾಲ್‌ ತರಲು ಸಾಧ್ಯವಾಗಿಲ್ಲ. ಇನ್ನು ಗುಜರಾತ್‌ನಲ್ಲಿ ಇನ್ನೂ ಲೋಕಾಯುಕ್ತ ಜಾರಿಯಾಗಿಲ್ಲ. ಲೋಕಸಭೆ ಉಪಚುನಾವಣೆಯಲ್ಲಿ 13 ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದ್ದು, ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿದೆ. ಜನರನ್ನು ಮೋಸ ಮಾಡುವ ತಂತ್ರ ಹೆಚ್ಚು ಸಮಯ ನಡೆಯುವುದಿಲ್ಲ. ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು. ಶಾಸಕ ವಸಂತ ಬಂಗೇರ, ತಾಲೂಕಿನಿಂದ 15 ಸಾವಿರಕ್ಕೂ ಹೆಚ್ಚು ಮಂದಿ ರ್ಯಾಲಿಗೆ ತೆರಳಿದ್ದಾರೆ ಎಂದು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯ ಬಳಿಕ ಪಕ್ಷದ ಮುಖಂಡರ ಸಭೆ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಯು.ಬಿ. ವೆಂಕಟೇಶ್‌, ಸವಿತಾ ರಮೇಶ್‌, ಪ್ರಭಾರ ಸಮಿತಿ ಅಧ್ಯಕ್ಷ ಧನಂಜಯ ಅಡಗಾಯ, ಕೆಪಿಸಿಸಿ ಸದಸ್ಯರಾದ ರಾಮಚಂದ್ರ ಗೌಡ, ಪೀತಾಂಬರ ಹೇರಾಜೆ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸುಂದರ ಗೌಡ, ತಾಲೂಕು ಚುನಾವಣಾ ಉಸ್ತುವಾರಿಗಳಾದ ವಿಜಯ್‌ ಕುಮಾರ್‌, ಸೈಮನ್‌, ಜಿ.ಪಂ. ಸದಸ್ಯ ಶಾಹುಲ್‌ ಹಮೀದ್‌, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ನ. ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next