ಕಲಬುರಗಿ: “ತಾವು ಹಣಕ್ಕೆ ಮಾರಾಟವಾಗಿದ್ದೇವೆಂದು ಆರೋಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ತಂದೆ-ತಾಯಿ ಹಾಗೂ ಮಕ್ಕಳ ಮೇಲೆ ಆಣೆ ಮಾಡಲಿ, ತಾವಂತೂ ಯಾವುದೇ ದೇವರ ಮೇಲೆ ಆಣೆ ಮಾಡಲು ಸಿದ್ಧದ್ದೇವೆ. ಅವರು ಆಣೆ ಮಾಡಲು ಬರುತ್ತಾರೆಯೇ?’ ಎಂದು ಡಾ| ಉಮೇಶ ಜಾಧವ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದಿದ್ದೇವೆ ಎನ್ನುವ ಸಚಿವರು ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬಹುದು. ಅದಕ್ಕೆ ತಾವು ಸಿದ್ಧ ಎಂದರು. ಸ್ಪೀಕರ್ ಒಬ್ಬ ತತ್ವವುಳ್ಳ ವ್ಯಕ್ತಿ. ಹೀಗಾಗಿ ಅವರ ಮೇಲೆ ವಿಶ್ವಾಸವಿದೆ. ಇದನ್ನು ಅವರಿಗೆ ಖುಷಿ ಪಡಿಸಲು ಹೇಳುತ್ತಿಲ್ಲ.
ಹೃದಯದಿಂದ ಈ ಮಾತು ಹೇಳುತ್ತಿದ್ದೇನೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೇ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಆಶೀರ್ವಾದ ತಮ್ಮ ಮೇಲಿದೆ ಎಂದರು.
ಚಿಂಚೋಳಿಗೆ ಬರುವಂತೆ ನೂರು ಸಲ ಕರೆದರೂ ಕ್ಷೇತ್ರದತ್ತ ಮುಖ ಮಾಡದ ಸಮಾಜ ಕಲ್ಯಾಣ ಸಚಿವರಿಗೆ ಈಗ ಎರಡು ದಿನಗಳ ಹಿಂದೆ ಚಿಂಚೋಳಿ ತಾಲೂಕು ನೆನಪಾಯಿತೇ? ತಮ್ಮನ್ನು ಮೂದಲಿಸಲೆಂದೇ ಚಿಂಚೋಳಿ ಕ್ಷೇತ್ರಕ್ಕೆ ಅವರು ಬಂದಿದ್ದರು. ಮುಖ್ಯವಾಗಿ ತಾವು ಕಾಂಗ್ರೆಸ್ ತ್ಯಜಿಸಿದ ನಂತರವಾದರೂ ಚಿಂಚೋಳಿ ಕ್ಷೇತ್ರ ಅವರಿಗೆ ನೆನಪಾಗಿ
ರುವುದು ಸ್ವಾಗತಾರ್ಹ ಎಂದು ಉಮೇಶ ಜಾಧವ್ ವ್ಯಂಗ್ಯವಾಡಿದರು