Advertisement

ಭಾರತ-ಚೀನ ಶಾಂತಿಗಾಗಿ ಪ್ರಶಸ್ತಿ ಹಿಂದಿರುಗಿಸಲು ಸಿದ್ಧ: ವಿಜೇಂದರ್‌

07:05 AM Aug 07, 2017 | |

ಮುಂಬಯಿ: ಭಾರತ ಮತ್ತು ಚೀನ ಗಡಿಯಲ್ಲಿ ಯುದ್ಧದ ವಾತಾವರಣವಿದ್ದು, ಶಾಂತಿ ಸ್ಥಾಪನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಶಾಂತಿ ಸ್ಥಾಪನೆಗಾಗಿ ತಾನು ಶನಿವಾರ ಗೆದ್ದಿರುವ ಡಬ್ಲ್ಯುಬಿಒ ಒರಿಯಂಟಲ್‌ ಸೂಪರ್‌ ಮಿಡಲ್‌ವೇಟ್‌ ಪ್ರಶಸ್ತಿಯನ್ನು ಜುಲ್ಫಿಕರ್‌ಗೆ ಹಿಂದಿರುಗಿಸಲು ಸಿದ್ಧ ಎಂದು ಭಾರತೀಯ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಿಳಿಸಿದ್ದಾರೆ.

Advertisement

“ನನಗೆ ಪ್ರಶಸ್ತಿ ಮುಖ್ಯವಲ್ಲ. ಎರಡು ರಾಷ್ಟ್ರಗಳ ನಡುವೆ ಶಾಂತಿ ಮುಖ್ಯ. ಈ ಮೂಲಕ ಚೀನಕ್ಕೆ ಮತ್ತು ಅಲ್ಲಿಯ ಮಾಧ್ಯಮಗಳಿಗೆ ಸಂದೇಶ ನೀಡಲು ಬಯಸುತ್ತೇನೆ. ನಾವು ಶಾಂತಿಯನ್ನು ನಿರೀಕ್ಷಿಸುತ್ತೇವೆ. ನನ್ನ ಮತ್ತು ಜುಲ್ಫಿಕರ್‌ ನಡುವಿನ ಬಾಕ್ಸಿಂಗ್‌ ಪಂದ್ಯವನ್ನು ಯುದ್ಧದ ದೃಷ್ಟಿಯಲ್ಲಿಯೇ ನೋಡಲಾಗಿದೆ. 

ಹೀಗಾಗಿ ಈ ವಾತಾವರಣ ಬದಲಾಗಬೇಕಿದೆ’ ಎಂದಿದ್ದಾರೆ ವಿಜೇಂದರ್‌. ಭಾರತ ಮತ್ತು ಚೀನ ಗಡಿಯಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಮೊಕ್ಕಾಂ ಹೂಡಿರುವುದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಯುದ್ಧ ನಡೆಯಬಹುದು ಎನ್ನುವ ಅನುಮಾನಗಳು ಇವೆ. ಹೀಗಾಗಿ ವಿಜೇಂದರ್‌ ಶಾಂತಿ ಸ್ಥಾಪನೆಯ ಹೇಳಿಕೆ ನೀಡಿದ್ದಾರೆ.

ಶನಿವಾರ ನಡೆದ ಪ್ರೊ ಬಾಕ್ಸಿಂಗ್‌ ಪಂದ್ಯದಲ್ಲಿ ವಿಜೇಂದರ್‌ ಚೀನದ ಜುಲ್ಫಿಕರ್‌ ಮಾಯ್‌ಮಾಯ್‌ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದಿದ್ದರು. ಇದು ವಿಜೇಂದರ್‌ಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಒಲಿದ ಸತತ 9ನೇ ಜಯ ಹಾಗೂ 2ನೇ ಪ್ರಶಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next