Advertisement

ಮಹದಾಯಿಗಾಗಿ ಮತ್ತೆ  ಪ್ರಧಾನಿ ಭೇಟಿಗೆ ಸಿದ್ಧತೆ 

05:34 PM May 24, 2018 | |

ಧಾರವಾಡ: ರೈತ, ದಲಿತ, ಕನ್ನಡಪರ, ಕಾರ್ಮಿಕ, ನಾಗರಿಕ ಸಂಘಟನೆಗಳ ಸಹಯೋಗ ಹಾಗೂ ಸಹ್ಯಾದ್ರಿ ನೆಲ-ಜಲ ಸಂರಕ್ಷಣೆ ಸಂಸ್ಥೆ ನೇತೃತ್ವದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಸಭೆ ಬುಧವಾರ ಇಲ್ಲಿನ ಕವಿಸಂನಲ್ಲಿ ನಡೆಯಿತು.

Advertisement

ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಜೂನ್‌ 15ರೊಳಗೆ ಬಾಗಲಕೋಟೆ, ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ 9 ತಾಲೂಕಿನ ರೈತ ಹೋರಾಟಗಾರ ನಿಯೋಗ ದೆಹಲಿಗೆ ತೆರಳಿ ಪ್ರಧಾನಮಂತ್ರಿ ಭೇಟಿ ಮಾಡಿ ವಾಸ್ತವ ಸಂಗತಿ ತಿಳಿ ಹೇಳಿಯುವ ಮೂಲಕ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡಿಕೊಳ್ಳಲು ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಇದರೊಂದಿಗೆ ಈ ಕುರಿತು ಸಹಕಾರ ನೀಡುವಂತೆ ಆಯಾ ರಾಜ್ಯ ಸರಕಾರಗಳಿಗೆ ಪತ್ರಗಳನ್ನು ಬರೆಯಲು ಹಾಗೂ ಮಹದಾಯಿ ಯೋಜನೆಯ ಉಪಯೋಗ ಪಡೆಯುವ ಪತ್ರಿಯೊಂದು ತಾಲೂಕಿನ ಜನರಿಗೆ ಸಹ್ಯಾದ್ರಿ ನೆಲ-ಜಲ ಸಂಸ್ಥೆ ವತಿಯಿಂದ ಜನರಿಂದ ನೇರವಾಗಿ ಮಾಹಿತಿ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಸಹ್ಯಾದ್ರಿ ನೆಲ-ಜಲ ಸಂರಕ್ಷಣೆ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಆರ್‌. ರಂಗನಾಥ, ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಹೀಗಾಗಿ ಮಹದಾಯಿ ನೀರಿಗಾಗಿ ಸುದೀರ್ಘ‌ ಹೋರಾಟ ಮಾಡದೇ ತಮ್ಮ ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಮಹದಾಯಿ ವಿಷಯ ಕುರಿತಂತೆ ನ್ಯಾಯಾಧೀಕರಣ ಆಗಷ್ಟ್ 21ರಂದು ಮಹದಾಯಿ ತೀರ್ಪು  ನೀಡಲಿದೆ. ಅಷ್ಟರಲ್ಲಿಯೇ ಜೂನ್‌ ತಿಂಗಳ ಒಳಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಪುನಃ ಭೇಟಿ ಮಾಡಿ ಅವರ ಮುಂದೆ ಮಹದಾಯಿ ವಿಷಯ ಮಂಡಿಸಿ, ಅನುಷ್ಠಾನಕ್ಕೆ ಒಪ್ಪಿಗೆ ಕೊಡಿಸಲಿದ್ದು, ಈ ಭಾಗದವರು ತಮಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮಹದಾಯಿ ಹಾಗೂ ಕಳಸಾ-ಬಂಡೂರಿ ವಿಷಯ ಕುರಿತಂತೆ ಈಗಾಗಲೇ ಗೋವಾ ಹಾಗೂ ಮಹಾರಾಷ್ಟ್ರ ಸರಕಾರದ ಅಧಿಕಾರಿಗಳು ಹಾಗೂ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ. ಕರ್ನಾಟಕ ಸರಕಾರ ಹಾಗೂ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

Advertisement

ಮಹದಾಯಿ ಹೋರಾಟಗಾರ ಶಂಕರ ಅಂಬಲಿ ಮಾತನಾಡಿ, ಮಹದಾಯಿ ವಿಷಯದಲ್ಲಿ ರೈತರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. 1300 ಸಂಘಟನೆಗಳು ಬೆಂಬಲದಿಂದ ಮೂರು ವರ್ಷ ಹೋರಾಟ ನಡೆಸಿದರೂ ಗುರಿ ತಲುಪಲಿಲ್ಲ. ಒಗ್ಗಟ್ಟಿನ ಕೊರತೆ, ಭಿನ್ನಾಭಿಪ್ರಾಯ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹೋರಾಟ ನೆಲಕಚ್ಚಿದೆ ಎಂದರು. ಮಾಜಿ ಶಾಸಕ ಬಿ.ಎಂ. ಹೊರಕೇರಿ ಅವರ ಕನಸಿನ ಕೂಸು ಮಹದಾಯಿ. ಹೀಗಾಗಿ 1040 ದಿನಗಳ ಸುದೀರ್ಘ‌ ಹೋರಾಟಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ. ಮಹದಾಯಿಗಾಗಿ ಮಹಾವೇದಿಕೆಯಿಂದ ಪ್ರಧಾನಮಂತ್ರಿ, ರಾಷ್ಟ್ರಪತಿ, ಗೋವಾ-ಮಹಾರಾಷ್ಟ್ರ ಸರಕಾರಗಳ ಕಣ್ಣು ತೆರೆಸುವ ಕೆಲಸ ನಡೆಯಲಿದೆ ಎಂದರು.

ಸಹ್ಯಾದ್ರಿ ಸಂಸ್ಥೆಯ ಪದಾಧಿಕಾರಿ ಹೊನ್ನಾಳಿ ನಾರಾಯಣ, ಶಂಕರಗೌಡ ಪಾಟೀಲ, ಮಧುಸೂದನ ತಿವಾರಿ, ಲಕ್ಪಣ ಬಕ್ಕಾಯಿ, ಬಸವರಾಜ ಸಾಭಳೆ ಸೇರಿದಂತೆ 9 ತಾಲೂಕಿನ ರೈತರು ಪಾಲ್ಗೊಂಡಿದ್ದರು.

ಕೆಲವರಿಗೆ ಹೋರಾಟ ಅಂತ್ಯ ಗೊಳ್ಳುವುದು ಬೇಕಿಲ್ಲ. ಈ ಹಿಂದಿನ ತಪ್ಪು ತಿದ್ದಿಕೊಂಡು ಎಲ್ಲರೂ ಮಹದಾಯಿಗಾಗಿ ಮಹಾವೇದಿಕೆ ಅಡಿಯಲ್ಲಿ ಬರುವ ಮೂಲಕ ನ್ಯಾಯಾಧಿಕರಣದ ಒಳಗೆ ಅಥವಾ ಹೊರಗಡೆಗೆ ಸಮಸ್ಯೆ ಇತ್ಯರ್ಥಗೊಂಡು ಕರ್ನಾಟಕಕ್ಕೆ ಮಹದಾಯಿ ಹರಿದು ಬಂದರೆ ನಮ್ಮೇಲ್ಲರ ಹೋರಾಟ ಸಾರ್ಥಕವಾಗಲಿದೆ.
 ಶಂಕರ ಅಂಬಲಿ, ಹೋರಾಟಗಾರ 

Advertisement

Udayavani is now on Telegram. Click here to join our channel and stay updated with the latest news.

Next