ಚಿಕ್ಕಬಳ್ಳಾಪುರ: ಕೋವಿಡ್-19 ವಿಚಾರದಲ್ಲಿ ಶ್ವೇತ ಪತ್ರ ಹೊರಡಿ ಸಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, “ಶ್ವೇತ ಪತ್ರ ಹೊರಡಿಸಲು ಸರ್ಕಾರ ಬದ್ಧವಾಗಿದೆ. ಆದರೆ, ವಿರೋಧ ಪಕ್ಷಗಳು ಕೋವಿಡ್ 19 ವಿಚಾರದಲ್ಲಿ ರಾಜಕಾರಣ ಕೈ ಬಿಟ್ಟು ಸರ್ಕಾರದೊಂದಿಗೆ ಕೈ ಜೋಡಿಸಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಹಕಾರ ನೀಡಬೇಕು’ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್ 2020ಕ್ಕೆ ನಿವೃತ್ತಿಯಾಗುತ್ತಿದ್ದ ಆರೋಗ್ಯ ಇಲಾಖೆ ವೈದ್ಯರ ಹಾದಿಯಾಗಿ ಕ್ಲಿನಿಕಲ್, ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನು 6 ತಿಂಗಳು ಮುಂದುವರಿಸಲು ಸರ್ಕಾರ ಕ್ರಮ ಕೈಗೊಂಡು ಆದೇಶ ಹೊರಡಿಸಿದೆ ಎಂದರು. ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ.
ವಿಶೇಷವಾಗಿ ಆಯುಷ್ ಇಲಾಖೆ ಜೊತೆಗೆ ಚರ್ಚೆ ನಡೆಸಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರಿಗೆ ಆಯುಷ್ ಇಲಾಖೆಯಿಂದ ರೋಗ ನಿರೋಧ ಶಕ್ತಿ ನೀಡುವ ಔಷಧ, ಮಾತ್ರೆಯನ್ನು ಸುಮಾರು 42 ಸಾವಿರ ಮಂದಿಗೆ ತರಿಸಲಾಗಿದೆ. ಸುಮಾರು 10 ಸಾವಿರ ಬೆಡ್ ಮೀಸಲಿಡಲಾಗಿದ್ದು ಚಿಕಿತ್ಸೆಗೆ ಮೂಲ ಸೌಕರ್ಯ ಕೊರತೆ ಇಲ್ಲ ಎಂದುತಿಳಿಸಿದರು.
ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಗೆ ಕೋವಿಡ್ 19 ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಘೋಷಣೆ ಅಗತ್ಯವಿಲ್ಲ. ಆಯುಷ್ ವೈದ್ಯಕೀಯ ಪದ್ಧತಿಯಿಂದ ಕೋವಿಡ್ 19 ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನತೆ ಅಗತ್ಯ ಸಹಕಾರ ನೀಡಬೇಕು.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ