Advertisement

Election: ಕಣಿವೆಯಲ್ಲಿ ಚುನಾವಣೆ ನಡೆಸಲು ಸಿದ್ದ : ಕೇಂದ್ರ 

07:32 PM Aug 31, 2023 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಈ ಕುರಿತಂತೆ ನಿರ್ಣಯ ತೆಗೆದುಕೊಳ್ಳುವುದು ಚುನಾವಣೆ ಆಯೋಗ ಹಾಗೂ ರಾಜ್ಯ ಚುನಾವಣೆ ಸಮಿತಿಗೆ ಬಿಟ್ಟ ವಿಚಾರವೆಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

Advertisement

370ನೇ ವಿಧಿ ರದ್ದು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕಣಿವೆಯಲ್ಲಿ ಮೂರು ಹಂತದ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.

ಮಂಗಳವಾರದ ವಿಚಾರಣೆಯಲ್ಲಿ ನ್ಯಾಯಪೀಠವು ಚುನಾಯಿತ ಸರ್ಕಾರದ ಅಗತ್ಯವಿರುವ ಕಾರಣ, ರಾಜ್ಯ ಸ್ಥಾನಮಾನ ಪುನಃಸ್ಥಾಪನೆ ಕೋರಿ ಸಲ್ಲಿಕೆಯಾಗಿದ್ದ ಮನವಿಗಳನ್ನು ಆಲಿಸಿ, ಕೇಂದ್ರದ ಪ್ರತಿಕ್ರಿಯೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮೆಹ್ತಾ ಅವರು ಪ್ರತಿಕ್ರಿಯೆ ನೀಡಿ ಜಮ್ಮುಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಶಾಶ್ವತ ಅಲ್ಲ. ಆದರೆ, ಇನ್ನೂ ಕೆಲವು ಸಮಯ ಕಣಿವೆ ಕೇಂದ್ರದ ಅಧೀನದಲ್ಲಿ ಇರುವ ಅಗತ್ಯವಿದೆ. ರಾಜ್ಯ ಸ್ಥಾನಮಾನ ಪುನಃಸ್ಥಾಪನೆ ಬಗ್ಗೆ ಈಗಲೇ ನಿಖರ ಗಡುವು ನೀಡಲು ಸಾಧ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ಗಣನೀಯ ಪ್ರಗತಿಯನ್ನಂತೂ ಸಾಧಿಸಲಾಗಿದೆ ಎಂದಿದ್ದಾರೆ.

ಸಿಬಲ್‌-ಮೆಹ್ತಾ ನಡುವೆ ತೀವ್ರ ವಾಗ್ವಾದ
ಕಣಿವೆಯಲ್ಲಿ 370ನೇ ವಿಧಿ ರದ್ದು ಬಳಿಕ ಬಂದ್‌, ಮುಷ್ಕರಗಳು ಕಡಿಮೆ ಆಗಿವೆ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಈ ವೇಳೆ ಅರ್ಜಿದಾರರ ಪರ ಹಿರಿ ವಕೀಲ ಕಪಿಲ್‌ ಸಿಬಲ್‌ ಆಕ್ಷೇಪ ವ್ಯಕ್ತಪಡಿಸಿದರು. ಪರಿಣಾಮ ಮೆಹ್ತಾ ಮತ್ತು ಸಿಬಿಲ್‌ ಅವರ ನಡುವೆ ತೀವ್ರ ವಾಗ್ವಾದಗಳು ನಡೆದಿವೆ. ಜನರನ್ನು ಗೃಹ ಬಂಧನದಲ್ಲಿರಿಸಿ, ಸೆಕ್ಷನ್‌ 144 ಜಾರಿಗೊಳಿಸಿ, ಅಂತರ್ಜಾಲ ಸೇವೆ ಕಡಿತಗೊಳಿಸಿ ಈಗ ಬಂದ್‌ ನಡೆದಿಲ್ಲವೆಂದು ಕೇಂದ್ರ ಹೇಳುತ್ತಿದೆ. 5,000 ಮಂದಿಯನ್ನೂ ಕೂಡಿ ಹಾಕಿದರೆ ಬಂದ್‌ ನಡೆಯುವುದಾದರೂ ಹೇಗೆ? ಕೇಂದ್ರದ ವರದಿಗಳು ಪ್ರಜಾಪ್ರಭುತ್ವವನ್ನೇ ಅಪಹಾಸ್ಯ ಮಾಡುತ್ತಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next