ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸುವುದೊಂದೇ ಮೀಸಲಾತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಇರುವ ಶಾಶ್ವತ ಮತ್ತು ಏಕೈಕ ಪರಿಹಾರ. ಇದಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಿದೆ, ಪ್ರಧಾನಿ ಮೋದಿ ಅವರು ಈ ಸವಾಲು ಸ್ವೀಕರಿಸಲು ಸಿದ್ಧ ಇದ್ದರೆ ಅದನ್ನು ಚುನಾವಣ ಭರವಸೆಯಾಗಿ ಘೋಷಿಸಬೇಕು. ಇಲ್ಲದಿದ್ದರೆ ಈಗಿನ ಬಾಯಿ ಬಡಾಯಿಯನ್ನು ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಪ್ರಧಾನಿ ಮೋದಿ ಕೆಲವು ದಿನಗಳಿಂದ ಮೀಸಲಾತಿ ಸುತ್ತ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿದ್ದಾರೆ. ಮೀಸಲಾತಿಗೆ ಈಗ ಇರುವ ಶೇ.50ರ ಮಿತಿಯನ್ನು ರದ್ದುಪಡಿಸಿ ಅದನ್ನು ಶೇ.75ಕ್ಕೆ ಹೆಚ್ಚಿಸುವ ಭರವಸೆಯನ್ನು ಕಳೆದ ವಿಧಾನಸಭಾ ಚುನಾವಣೆಯ ನಮ್ಮ ಪ್ರಣಾಳಿಕೆಯಲ್ಲಿಯೇ ಘೋಷಿಸಿದ್ದೆವು. ಈ ಘೋಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಮೀಸಲಾತಿ ನಿಗದಿಪಡಿಸಿರುವುದು ಈಗಿನ ನಮ್ಮ ಸರಕಾರ ಅಲ್ಲ. ಮೀಸಲಾತಿ ನಿರ್ಣಯಕ್ಕಾಗಿಯೇ ಸ್ಥಾಪಿಸಲಾದ ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಮತ್ತು ರವಿವರ್ಮ ಕುಮಾರ್ ಅಧ್ಯಕ್ಷತೆಯ ನಾಲ್ಕು ಹಿಂದುಳಿದ ವರ್ಗಗಳ ಆಯೋಗಗಳು ಕೂಡ ಮುಸ್ಲಿಮರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಈ ಶಿಫಾರಸುಗಳು ಕಾಲಕಾಲಕ್ಕೆ ನ್ಯಾಯಾಲಯದ ಪರಿಶೀಲನೆಗೆ ಕೂಡ ಒಳಪಟ್ಟಿವೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಸ್ವಿತದಲ್ಲಿತ್ತು ಮತ್ತು ಅಧಿಕಾರದ ಸ್ಥಾನವನ್ನು ಕೂಡ ಹೊಂದಿತ್ತು. ಹೀಗಿದ್ದರೂ ಬಿಜೆಪಿ ಇಲ್ಲಿಯ ವರೆಗೆ ಮುಸ್ಲಿಂ ಮೀಸಲಾತಿಯನ್ನು ಯಾಕೆ ಪ್ರಶ್ನಿಸಿಲ್ಲ ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಉತ್ತರ ಇದೆಯೇ? ಬಸವರಾಜ ಬೊಮ್ಮಾಯಿ ಸರಕಾರ ಇದೇ ಮುಸ್ಲಿಂ ಮೀಸಲಾತಿಯನ್ನು ರದ್ದು ಪಡಿಸಿದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಏನು ಹೇಳಿದ್ದರು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರೆ ಮುಸ್ಲಿಂ ಮೀಸಲಾತಿ ಬಗ್ಗೆ ಇಂಥದ್ದೊಂದು ಅಜ್ಞಾನದಿಂದ ಕೂಡಿದ ಹೇಳಿಕೆಯನ್ನು ನೀಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.