ಕೋಲ್ಕತ : ‘ಪಶ್ಚಿಮ ಬಂಗಾಲದಲ್ಲಿ ಸಿಬಿಐ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ನಾನು ಪ್ರಾಣವನ್ನು ಬೇಕಾದರೂ ಕೊಟ್ಟೇನು, ಆದರೆ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
‘ನೀವು (ಬಿಜೆಪಿಯವರು) ನನ್ನ ಪಕ್ಷದ ನಾಯಕರನ್ನು ಸುಟ್ಟಾಗ ನಾನು ಬೀದಿಗಿಳಿದಿರಲಿಲ್ಲ’ ಎಂದು ಹೇಳುವ ಮೂಲಕ ಸಿಎಂ ಮಮತಾ, ಕೇಂದ್ರದಲ್ಲಿನ ಬಿಜೆಪಿ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
“ಈ ಬಾರಿ ಕೇಂದ್ರ ಸರಕಾರ ಕೋಲ್ಕತ ಪೊಲೀಸ್ ಕಮಿಷನರರ ಸ್ಥಾನವನ್ನೇ ಅವಮಾನಿಸಿದೆ. ರಾಜ್ಯದ ಇಡಿಯ ಪೊಲೀಸ್ ವ್ಯವಸ್ಥೆಯ ನೇತೃತ್ವ ವಹಿಸಿರುವ ಅವರನ್ನು ಈ ರೀತಿ ಅವಮಾನಿಸುವುದು ಎಷ್ಟು ಸರಿ ?” ಎಂದು ಮಮತಾ ತನ್ನ ಆಕ್ರೋಶವನ್ನು ತೋರ್ಪಡಿಸಿದ್ದಾರೆ.
ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಕೋಲ್ಕತ ಪೊಲೀಸ್ ಮುಖ್ಯಸ್ಥರನ್ನು ಪ್ರಶ್ನಿಸಲು ಮುಂದಾಗಿರುವುದನ್ನು ಪ್ರತಿಭಟಿಸಿ ಮಮತಾ ಬ್ಯಾನರ್ಜಿ ಆರಂಭಿಸಿದ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನ ತಲುಪಿದೆ. ‘ಸಂವಿಧಾನವನ್ನು ಮತ್ತು ದೇಶವನ್ನು ರಕ್ಷಿಸುವ ನನ್ನ ಗುರಿಯನ್ನು ಸಾಧಿಸುವ ತನಕ ನಾನು ಈ ಧರಣಿ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ’ ಎಂದು ಮಮತಾ ದೃಢ ಮಾತುಗಳನ್ನು ಆಡಿದ್ದಾರೆ.
ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಪ್ರಶ್ನಿಸುವ ಸಿಬಿಐ ವಿಫಲ ಯತ್ನ ನಡೆಸಿರುವುದನ್ನು ಅನುಸರಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮಮತಾ ಬ್ಯಾನರ್ಜಿ ನಡುವೆ ಸಂಘರ್ಷ ತೀವ್ರಗೊಂಡಿದೆ.