Advertisement

ಸಿಎಂಗಾಗಿ ಚಂದವಾಗಿ ಸಿದ್ಧವಾಗ್ತಿದೆ ಚಂಡರಕಿ!

01:08 AM Jun 15, 2019 | Team Udayavani |

ಯಾದಗಿರಿ: ‘ಚಂಡರಕಿ!’ಸದ್ಯ ಗಲ್ಲಿಯಿಂದ ಹಿಡಿದು ಶಕ್ತಿಸೌಧದವರೆಗೆ ನಾಲಿಗೆ ತುದಿಯ ಮೇಲೆ ನಲಿದಾಡುತ್ತಿರುವ ಗ್ರಾಮದ ಹೆಸರು. ಹತ್ತಾರು ವರ್ಷಗಳಿಂದ ಮೂಲಸೌಲಭ್ಯ ಇಲ್ಲದೇ ಪರದಾಡಿದರೂ ಇಲ್ಲಿನ ಜನರ ಗೋಳು ಕೇಳುವವರಿರಲಿಲ್ಲ. ಈಗ ನಾಡಿನ ದೊರೆ ಗ್ರಾಮ ವಾಸ್ತವ್ಯಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆಯೇ, ಈ ಹಳ್ಳಿಯತ್ತ ತಲೆ ಹಾಕಿಯೂ ಮಲಗದ ಅಧಿಕಾರಿಗಳು ದೌಡಾಯಿಸಿ ಬರುತ್ತಿದ್ದಾರೆ. ಗ್ರಾಮಸ್ಥರು ಕಣ್‌ಕಣ್‌ ಬಿಟ್ಟು ನೋಡುತ್ತಿದ್ದಾರೆ.

Advertisement

ಗುರುಮಠಕಲ್ ತಾಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ ಈ ಗ್ರಾಮ. ಜನಸಂಖ್ಯೆ ಸುಮಾರು 8,000. ಗ್ರಾಪಂ. ಕಾರ್ಯಾಲಯವುಂಟು, ಜತೆಯಲ್ಲೇ ಗ್ರಾಮದ ತುಂಬಾ ಅವ್ಯವಸ್ಥೆಯೂ ಉಂಟು. ರಸ್ತೆಗಳಲ್ಲೇ ಚರಂಡಿ ನೀರು ಹರಿಯುವುದು ಇಲ್ಲಿ ಸರ್ವೇಸಾಮಾನ್ಯ. ತಾತ್ಕಾಲಿಕವಾಗಿ ನೀರಿನ ಪೈಪ್‌ಲೈನ್‌ ಮಾಡಿದ್ದರೂ, ಪೈಪ್‌ಲೈನ್‌ ಸೋರಿಕೆಯಾದರೆ ಚರಂಡಿ ನೀರು ಜನರ ಹೊಟ್ಟೆ ಸೇರೋದು ಪಕ್ಕಾ. ಗ್ರಾಮ 24 ಗಂಟೆ ವಿದ್ಯುತ್‌ ನೀಡುವ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಕರೆಂಟ್ ಯಾವಾಗ ಬರುತ್ತೆ, ಹೋಗುತ್ತೆ ಎಂಬುದು ಗೊತ್ತಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆಯುಂಟು, ಸ್ಮಶಾನಕ್ಕಾಗಿ ಗ್ರಾಮದ ಆಚೆ ಮತ್ತು ಈಚೆ ಅರ್ಧ ಎಕರೆ ಭೂಮಿ ಮೀಸಲಾಗಿಟ್ಟಿದ್ದರೂ, ಹೂತ ಜಾಗದಲ್ಲೇ ಮತ್ತೂಮ್ಮೆ ಹೆಣ ಹೂಳುವ ಪರಿಸ್ಥಿತಿಯೂ ಉದ್ಭವವಾಗುತ್ತಿರುತ್ತದೆ.

ಭರದ ಕಾಮಗಾರಿ: ಸಿಎಂಗಾಗಿ ಮೂಲ ಸೌಕರ್ಯಗಳ ಕಾಮಗಾರಿ ಶುರುವಾಗಿದೆ. ಕುಡಿವ ನೀರಿಗಾಗಿ ಭೀಮಾ ನದಿಯಿಂದ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಪ್ರತಿಭಟನೆಗೆ ರೈತರ ನಿರ್ಧಾರ
ಗ್ರಾಮದಲ್ಲಿ ಪವನ ವಿದ್ಯುತ್‌ ಉತ್ಪಾದನೆಗೆ ಜಮೀನು ನೀಡಿರುವ ರೈತರಲ್ಲಿ 41 ರೈತರಿಗೆ ಹಣ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ.ಇದರಿಂದ ಕಂಗೆಟ್ಟಿರುವ ರೈತರು ಹಲವು ಬಾರಿ ಮುಖಂಡರ ಮೂಲಕ ಸಂಬಂಧಿಸಿದವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ಗ್ರಾಮಕ್ಕೆ ಆಗಮಿಸುತ್ತಿರುವ ಸಿಎಂ ಎದುರು ಪ್ರತಿಭಟನೆ ನಡೆಸುವ ನಿರ್ಧಾರ ಮಾಡಿದ್ದಾರೆ.

ಬೇಡಿಕೆಗಳೇನು?
-ಗ್ರಾಮದಲ್ಲಿ ಅಗತ್ಯವಿರುವೆಡೆ ರಸ್ತೆ ಮಾಡಿ
– ಬ್ಯಾಂಕ್‌ ಆರಂಭಿಸಿ
– ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿ
– ಸಮುದಾಯ ಭವನ ನಿರ್ಮಿಸಿ.
– ರೈತ ಸಂಪರ್ಕ ಉಪ ಕೇಂದ್ರ ಆರಂಭಿಸಿ.
– ಅಗತ್ಯವಿರುವೆಡೆ ಚರಂಡಿ ನಿರ್ಮಿಸಿ.
– ಕೋಟೆ ಪಕ್ಕದ ಹಳ್ಳಕ್ಕೆ ಸೇತುವೆ ನಿರ್ಮಿಸಿ.
– ಗ್ರಾಮದ ಕೆರೆಯಲ್ಲಿನ ಹೂಳು ತೆಗೆಸಿ
– ಅತಿ ಕ್ರಮಣ ತಪ್ಪಿಸಲು ಸ್ಮಶಾನಕ್ಕೆ ಬೇಲಿ ಹಾಕಿ

Advertisement

ಗ್ರಾಪಂ ಇದ್ದರೂ ಸಮರ್ಪಕ ಕಾರ್ಯವಾಗಿಲ್ಲ. ಈಗ ಮುಖ್ಯಮಂತ್ರಿಗಳೇಗ್ರಾಮಕ್ಕೆ ಆಗಮಿಸುತ್ತಿದ್ದು ಇನ್ನುಮೇಲಾದರೂ ಗ್ರಾಮದ ಅಭಿವೃದ್ಧಿಯಾಗಲಿ.
– ಭೀಮಣ್ಣ ಅಗಸರ, ಗ್ರಾಮದ ಮುಖಂಡ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next