ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಸಹ್ಯಾದ್ರಿ ಪರ್ವತ ಎಂದೇ ಪ್ರಸಿದ್ಧವಾಗಿರುವ ಜಿಲ್ಲೆಯ ಕಪ್ಪತ್ತಗುಡ್ಡದ ರಕ್ಷಣೆಗಾಗಿ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಸದಾ ಸಿದ್ಧವಾಗಿದೆ ಎಂದು ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಬಕಾರಿ ಸಚಿವನಾಗಿದ್ದಾಗ ಒಮ್ಮೆ ಕಪ್ಪತ್ತಗುಡ್ಡಕ್ಕೆಭೇಟಿ ನೀಡಿದ್ದೆ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದೆ. ಹೀಗಾಗಿ ಅರಣ್ಯ ಇಲಾಖೆ ಸಚಿವನಾಗುತ್ತಿದ್ದಂತೆ ವನ್ಯಜೀವಿ ಮಂಡಳಿ ಸಭೆ ಕರೆದು, ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿ, ಆದೇಶ ಹೊರಡಿಸಿದ್ದೆ.
ಜಿಲ್ಲೆಯ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಪ್ಪತ್ತಗುಡ್ಡದ ಹಸಿರು ಸಿರಿ ಮೈಯೊಡ್ಡಿದೆ. ಈ ಪೈಕಿ 24,415.73 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿಧಾಮ ಎಂದು ಘೋಷಿಸಲಾಗಿದೆ. ವನ್ಯಧಾಮದ ಸುತ್ತಲಿನ ಇಎಸ್‌ಜೆಡ್ 10-15 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶವಿಲ್ಲ. ಕೆಲ ಪಟ್ಟಭದ್ರರು ಕಪ್ಪತ್ತಗುಡ್ಡದ ವನ್ಯಜೀವಿಧಾಮ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಆರಂಭಿಸಲು ಅನುಕೂಲ ಆಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಈ ಗುಡ್ಡವನ್ನು ವನ್ಯಜೀವಿಧಾಮದಿಂದ ಮುಕ್ತ ಮಾಡಲು ಶಿಫಾರಸ್ಸು ಮಾಡಿಸುವ ಹುನ್ನಾರ ನಡೆಸುತ್ತಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಅಪರೂಪದ ಔಷಧ ಸಸ್ಯಗಳೊಂದಿಗೆ ವನ್ಯಜೀವಿಗಳೂ ನೆಲೆಕಂಡಿವೆ.
ಹೀಗಾಗಿ ಕಪ್ಪತ್ತಗುಡ್ಡದ ರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕಪ್ಪತ್ತಗುಡ್ಡ ಉಳಿಸಲು ಎಂತಹ ಉಗ್ರ ಹೋರಾಟಕ್ಕೂ ಕಾಂಗ್ರೆಸ್ ಸದಾ ಸಿದ್ಧ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆದ ಪ್ರತಿಫಲವಾಗಿ ಪೋಕ್ಸೋದಂತಹ ದೈತ್ಯ ಕಂಪನಿಗಳು ಜಿಲ್ಲೆಯಿಂದ ಪಲಾಯನ ಮಾಡಿದ್ದವು. ಆದರೆ ಇದೀಗ ಬಿಜೆಪಿ ಸರ್ಕಾರ ವನ್ಯಜೀವಿಧಾಮದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.