Advertisement

ಗೃಹ ರಕ್ಷಕರಿಗೆ ಸೌಲಭ್ಯ ನೀಡಲು ಸಿದ್ಧ

08:36 PM Dec 16, 2019 | Lakshmi GovindaRaj |

ಯಳಂದೂರು: ಗೃಹ ರಕ್ಷಕ ಸಿಬ್ಬಂದಿಯನ್ನು ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತಿದೆ. ಆದರೆ, ಇನ್ನೂ ಕೆಲವು ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಇವರಿಗೆ ಪಿಎಫ್, ಇಎಸ್‌ಐ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಗೃಹ ಸಚಿವರು ಹಾಗೂ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಶಾಸಕ ಎನ್‌. ಮಹೇಶ್‌ ತಿಳಿಸಿದರು.

Advertisement

ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖೀಲ ಭಾರತ ಗೃಹ ರಕ್ಷಕದಳದ ದಿನಾಚರಣೆಯ ಜಿಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರ ಅನುಪಸ್ಥಿತಿಯಲ್ಲಿ ಇವರ ಸೇವೆ ಅನನ್ಯವಾಗಿದೆ. ಪ್ರಾಮಾಣಿಕವಾಗಿ ದೇಶ ಸೇವೆ ಮಾಡುವ ಇವರು, ಈಚೆಗೆ ಟ್ರಾಫಿಕ್‌ ಸಮಸ್ಯೆಯನ್ನು ತಡೆಗಟ್ಟುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.

ರಕ್ಷಣಾ ಕಾರ್ಯಕ್ಕೆ ಬಳಕೆ: ದೇಶದಲ್ಲಿ ಗೃಹ ರಕ್ಷಕ ಇಲಾಖೆಗೆ ಇತಿಹಾಸವಿದೆ. 1946ರಲ್ಲಿ ಬಾಂಬೆ ಸರ್ಕಾರದಿಂದ ಇವರ ಸೇವೆ ಆರಂಭಗೊಂಡಿತು. 1962ರಲ್ಲಿ ಭಾರತ -ಚೀನಾ ಯುದ್ಧದ ಸಂದರ್ಭದಲ್ಲಿ ಇವರನ್ನೂ ಸಹ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಗೃಹ ರಕ್ಷಕದಳದ ಸಿಬ್ಬಂದಿ ಇದ್ದಾರೆ. ಇದರಲ್ಲಿ ಪದವಿ ಪಡೆದವರೂ ಇದ್ದಾರೆ. ಈಗಲೂ ಇವರು ಪ್ರತಿನಿತ್ಯ 360 ರೂ.ಗಳ ಗೌರವಧನದ ಆಧಾರದ ಮೇಲೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಏಪ್ರಿಲ್‌ನಿಂದ 750 ರೂ.: ಮುಂದಿನ ವರ್ಷದ ಏಪ್ರಿಲ್‌ನಿಂದ ಇವರ ಗೌರವಧನವನ್ನು ಪ್ರತಿನಿತ್ಯ 750 ರೂ.ಗಳಿಗೆ ಏರಿಸಲು ಸರ್ಕಾರದ ಯೋಜನೆ ಇದೆ. ವರ್ಷಕ್ಕೆ ಪೊಲೀಸ್‌ ಸಿಬ್ಬಂದಿಗೆ ನೀಡುವಂತೆ ಇವರಿಗೂ 2 ಸಮವಸ್ತ್ರಗಳನ್ನು ನೀಡಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗುವುದು. ಗೃಹ ರಕ್ಷಕ ದಳದ ಮುಖ್ಯ ಕಮಾಂಡೆಂಟ್‌ ಎಂ.ಎನ್‌. ರೆಡ್ಡಿ ಹಾಗೂ ಗೃಹ ಸಚಿವರೊಂದಿಗೆ ಈ ವಿಷಯ ಚರ್ಚಿಸಲಾಗುವುದು.

ಇವರ ಸೇವೆಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಸೌಲಭ್ಯದೊಂದಿಗೆ ಇತರೆ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು. ಪಟ್ಟಣ ಪಂಚಾಯ್ತಿ ಹಳೆ ಕಟ್ಟಡದಲ್ಲಿ ಇವರಿಗೆ ಕಚೇರಿಯನ್ನು ನಿರ್ಮಿಸಿಕೊಳ್ಳಲು ಸೂಚನೆ ನೀಡಲಾಗುವುದು. ಇದರಿಂದ ಇಲ್ಲಿನ ಮಹಿಳಾ ಸಿಬ್ಬಂಗಿಗೂ ಸಮವಸ್ತ್ರಗಳನ್ನು ಧರಿಸಲು ನೆರವು ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ, ಕ್ರೀಡೆಯಲ್ಲಿ ಬಹುಮಾನ ಪಡೆದ ಸಿಬ್ಬಂದಿ ಹಾಗೂ ಇವರಿಗೆ ಸಹಕರಿಸಿದ ಅನೇಕರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಆರಕ್ಷಕ ಉಪಾಧೀಕ್ಷ ಎನ್‌. ನವೀನ್‌ಕುಮಾರ್‌, ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್‌ ಬಿ.ಎಸ್‌. ಬಸವರಾಜು, ಪಿಎಸ್‌ಐ ರವಿಕುಮಾರ್‌, ಜಿಲ್ಲಾ ಬೋಧಕ ಎಂ.ರಾಮಣ್ಣ, ಘಟಕಾಧಿಕಾರಿ ಎಂ. ನಾಗರಾಜು, ಉಪಾಧ್ಯಕ್ಷ ಭೀಮಪ್ಪ, ಮಾಜಿ ಸದಸ್ಯ ವೈ.ವಿ. ಉಮಾಶಂಕರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ನೂರಾರು ಗೃಹ ರಕ್ಷಕ ಸಿಬ್ಬಂದಿ ಹಾಜರಿದ್ದರು.

ಗೃಹ ರಕ್ಷದ ದಳದ ಸೇವೆ ಅನನ್ಯವಾಗಿದೆ. ಪ್ರಕೃತಿ ವಿಕೋಪ, ಚುನಾವಣೆ, ಇತರೆ ಗಲಭೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇವರ ಸೇವೆ ಅಗತ್ಯವಿದೆ. ಪಟ್ಟಣ ಪಂಚಾಯ್ತಿ ಹಳೆ ಕಟ್ಟಡದಲ್ಲಿ ಕಚೇರಿ ನಿರ್ಮಿಸುವ ಇವರ ಬೇಡಿಕೆಯನ್ನು ಪಪಂ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.
-ವರ್ಷಾ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next