Advertisement

ಆರೆಸ್ಸೆಸ್‌ನವರಿಗೂ ವಿವರಣೆ ನೀಡಲು ಸಿದ್ಧ

07:40 AM Nov 15, 2017 | Team Udayavani |

ವಿಧಾನಪರಿಷತ್ತು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಾ ತಮ್ಮ ಬಗ್ಗೆ ಕೆಲವರು ಕೇವಲವಾಗಿ ಮಾತನಾಡುತ್ತಿರುವುದರಿಂದ ಭಾವೋದ್ವೇಗಕ್ಕೊಳಗಾದ ಆರೋಗ್ಯ ಸಚಿವ ಕೆ. ಆರ್‌.ರಮೇಶ್‌ಕುಮಾರ್‌, “ವಿಧೇಯಕದ ಕುರಿತು ಆರ್‌ಎಸ್‌ಎಸ್‌ ಪ್ರಮುಖರು, ಕಾರ್ಯಕರ್ತರ ಸಭೆ ಆಯೋಜಿಸಿ ತಮ್ಮ ಆಶಯ ತಪ್ಪು ಎಂದು ಹೇಳಿದರೆ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುವುದಾಗಿ’ ಸವಾಲು ಹಾಕಿದರು.

Advertisement

ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿ ಮಠ ಅವರು ಖಾಸಗಿ ವೈದ್ಯರ ಮುಷ್ಕರ ವಿಚಾರ ಪ್ರಸ್ತಾಪಿಸಿದಾಗ ಉತ್ತರಿಸಿದ ಸಚಿವರು, “ವಿಪಕ್ಷ ನಾಯಕರು ನನ್ನನ್ನುಕೊಲೆ ಗಡುಕ, ಮಕ್ಕಳಿಲ್ಲದವನು ಎಂದೆಲ್ಲಾ ಟೀಕಿಸಿದ್ದಾರೆ. ನನಗಿಬ್ಬರು ಮಕ್ಕಳಿದ್ದಾರೆ ‘ ಎನ್ನುತ್ತಾ ಭಾವುಕರಾದರು. ಸೈದ್ಧಾಂತಿಕವಾಗಿ ನಾನು ಬಿಜೆಪಿ, ಆರ್‌ಎಸ್‌ಎಸ್‌ಗಳನ್ನು ಒಪ್ಪುವುದಿಲ್ಲ. ಆದರೆ, ಜನಹಿತ ದೃಷ್ಟಿಯಿಂದ ಮಂಡನೆ ಮಾಡಿದ ಈ ವಿಧೇಯಕ ಕುರಿತು ಆರ್‌ಎಸ್‌ಎಸ್‌ ಸಭೆ ನಡೆಸಿ ನನ್ನನ್ನು ಆಹ್ವಾನಿಸಿದರೆ ಹೋಗಿ ವಿವರಣೆ ನೀಡುವೆ. ನನ್ನ ಕಡೆಯಿಂದ ತಪ್ಪಾಗಿದೆಯೇ ಎಂಬುದನ್ನು ಅವರೇ ನಿರ್ಣಯಿಸಲಿ. ಅದನ್ನು ಬಿಟ್ಟು ನೀವು (ಬಿಜೆಪಿ) ಏಕಾಏಕಿ ನನ್ನನ್ನು ಕೊಲೆಗಡುಕ ಎಂದು ಕರೆದಿದ್ದೀರಿ. ಯಾವ ಠಾಣೆ, ಕೋರ್ಟ್‌ನಲ್ಲಿ ಕೇಸ್‌ ಇದೆ ಎಂಬುದನ್ನಾದರೂ ಹೇಳಿ. ನಿಮ್ಮ ಹೇಳಿಕೆಯಿಂದ ಮಗನೇ ನನ್ನನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಮತ್ತೆ ಭಾವೋದ್ವೇಗಕ್ಕೆ ಒಳಗಾದರು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)ವಿಧೇಯಕ ನನ್ನ ಪ್ರತಿಷ್ಠೆ ಅಥವಾ ಹಠ ಅಲ್ಲ. ಎಲ್ಲ ಪಕ್ಷಗಳ ಸಹಮತ ಪಡೆದಿದ್ದೇನೆ. ನನ್ನ ಪಕ್ಷದವರು ಸೇರಿ ಎಲ್ಲ ಪಕ್ಷಗಳ ಕೆಲವರ ಭಿನ್ನಾಭಿಪ್ರಾಯವೂ ಇತ್ತು. ಕರಡು ರಚನೆ ವೇಳೆ ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿನಿಧಿಗಳಿಗೆ ಕರಡು ಪ್ರತಿ ನೀಡಲಾಗಿತ್ತು. ನಂತರ ಅವರು ಮುಖ್ಯಮಂತ್ರಿ, ರಾಜ್ಯಪಾಲರನ್ನು ಭೇಟಿ ಮಾಡಿದರೇ ವಿನಃ ಕರಡಿಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತಿದ್ದುಪಡಿ ಪರಿಶೀಲನೆಗೆ ಜಂಟಿ ಪರಿಶೀಲನಾ ಸಮಿತಿಯೂ ಈಗ ವರದಿ ನೀಡಿದೆ. ಇದೀಗ ತೀವ್ರ ವಿರೋಧ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಪಕ್ಷ ನಾಯಕರಿಂದ ನಾನು ಕೊಲೆಗಡುಕ ಪಟ್ಟ ಹೊತ್ತುಕೊಳ್ಳಬೇಕಾಗಿದೆ. ಅಂತಹ ತಪ್ಪು ಏನು ಮಾಡಿದ್ದೀರಿ ಎಂದು ನನ್ನ ಮಗನೇ ಕೇಳುತ್ತಿದ್ದಾನೆ. ಇದಕ್ಕೆ ವಿಪಕ್ಷ ನಾಯಕರೇ ಪರಿಹಾರ ಸೂಚಿಸಬೇಕು ಎಂದರು. ಕೆ.ಎಸ್‌.ಈಶ್ವರಪ್ಪ ಮಧ್ಯಪ್ರವೇಶಿಸಿ, ವೈದ್ಯರು ಉಪವಾಸಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ನೀವು ಸೇರಿ ವೈದ್ಯರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next