Advertisement

ರಾಜ್ಯ ಸರ್ಕಾರ ಕಿತ್ತೂಗೆಯಲು ಜನ ಸಿದ್ಧ: ಜಾವಡೇಕರ್‌

07:00 AM Sep 05, 2017 | |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಜನವಿರೋಧಿ, ರೈತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಸರ್ಕಾರನ್ನು ಮೂಲದಿಂದಲೇ ಕಿತ್ತುಹಾಕಲು ರಾಜ್ಯದ ಜನ ಬಯಸುತ್ತಿದ್ದು, ಸೆಪ್ಟೆಂಬರ್‌ನಲ್ಲೇ ಮುಂದಿನ ಏಪ್ರಿಲ್‌ ತಿಂಗಳಿಗಾಗಿ ಕಾಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

Advertisement

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಮೊದಲ ಬಾರಿ ರಾಜ್ಯಕ್ಕೆ ಸೋಮವಾರ ಆಗಮಿಸಿದ್ದ ಅವರು ಪಕ್ಷದ ಕೋರ್‌ ಕಮಿಟಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡು ಸಭೆಗಳಲ್ಲಿ ರಾಜ್ಯ ಮತ್ತು ಪಕ್ಷದ ಚಿತ್ರಣವನ್ನು ನಾನು ಪಡೆದುಕೊಂಡಿದ್ದೇನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆಯಲು ಪಕ್ಷದ ಕಾರ್ಯಕರ್ತರು ಮತ್ತು ಜನರು ಉತ್ಸುಕರಾಗಿರುವುದು ಗಮನಕ್ಕೆ ಬಂದಿದೆ ಎಂದರು.

ರಾಜ್ಯದ ಜನವಿರೋಧಿ, ರೈತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಮತ್ತು ಭ್ರಷ್ಟ ಸರ್ಕಾರದ ಬಗ್ಗೆ ಜನ ಸಾಕಷ್ಟು ಬೇಸತ್ತಿದ್ದಾರೆ. ಈ ಜನರ ಆಕ್ರೋಶ ಎಷ್ಟರ ಮಟ್ಟಿಗೆ ಇದೆ ಎಂದರೆ ಸರ್ಕಾರವನ್ನು ಕಿತ್ತೂಗೆಯಲು ಸೆಪ್ಟೆಂಬರ್‌ನಲ್ಲೇ ಏಪ್ರಿಲ್‌ ತಿಂಗಳಿಗಾಗಿ (ವಿಧಾನಸಭೆ ಚುನಾವಣೆ) ಕಾಯುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಬಯಸಿರುವ ಜನ ಬಿಜೆಪಿಯೊಂದಿಗೆ ಇದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಉತ್ತರ ಕರ್ನಾಟಕ ಮತ್ತು ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೇ ಇರುವ ಬಗ್ಗೆ ಉಂಚಾಗಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಪ್ರಕಾಶ್‌ ಜಾವಡೇಕರ್‌, ಕರ್ನಾಟಕಕ್ಕೆ ಮತ್ತೆ ಉತ್ತಮ ದಿನಗಳು ಬರುವಂತೆ ಮಾಡುವುದು ಮತ್ತು ಒಳ್ಳೆಯ ಆಡಳಿತ ನೀಡುವುದು ಬಿಜೆಪಿ ಗುರಿ. ಈ ನಿಟ್ಟಿನಲ್ಲಿ ಜನ ನಮ್ಮೊಂದಿಗಿದ್ದಾರೆ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next