ಉಡುಪಿ: ಸೈಂಟ್ ಸಿಸಿಲಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣ ಗೊಂಡಿವೆ ಎಂದು ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಬುಧವಾರ ಮತ ಎಣಿಕೆ ಕೇಂದ್ರದಲ್ಲಿನ ಸಿದ್ಧತೆಗಳ ಕುರಿತು ಪರಿಶೀಲಿಸಿ ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲ ರೀತಿಯ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಇವಿಎಂಗಳ ಎಣಿಕೆಯ ಅನಂತರ ವಿವಿಪ್ಯಾಟ್ ಸ್ಲಿಪ್‌ಗ್ಳ ಎಣಿಕೆ ಮಾಡಲಾಗುವುದು. ಮತ ಎಣಿಕೆಗೆ ನಿಯೋಜಿಸಿರುವ ಎಲ್ಲ ಅಧಿಕಾರಿಗಳು, ಸಿಬಂದಿ, ಪಕ್ಷಗಳ ಏಜೆಂಟರು ಸೇರಿದಂತೆ ಎಲ್ಲರಿಗೂ ಮತದಾನ ಕೇಂದ್ರದದಲ್ಲಿಯೇ ಊಟ, ಉಪಾಹಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಮತದಾನ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ವೀಕ್ಷಕರ ಕಚೇರಿ, ಅಂಚೆ ಮತ ಪತ್ರ ಎಣಿಕೆ ಮತ್ತು ವಿವಿಪ್ಯಾಟ್ ಎಣಿಕೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿ, ಮತ ಎಣಿಕೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ಯಾಟ್ ಸ್ಲಿಪ್‌ಗ್ಳ ಎಣಿಕೆ ಅನಂತರ ಅಂತಿಮ ಫಲಿತಾಂಶ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.