ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವನ್ನು ಪರಿಗಣಿಸಲು ಸಿದ್ಧ, ಆದರೆ ಕಾಯ್ದೆ ರದ್ದು ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಭಟನಾನಿರತ ರೈತ ಮುಖಂಡರು ಮತ್ತು ಕೇಂದ್ರದ ನಡುವಿನ ಮಾತುಕತೆಗೂ ಮುನ್ನ ಈ ಸಂದೇಶವನ್ನು ರವಾನಿಸಿರುವುದಾಗಿ ವರದಿ ತಿಳಿಸಿದೆ.
ಕೇಂದ್ರ ಸಚಿವರಾದ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರಾಜ್ಯ ಖಾತೆ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ರೈತರ ಜತೆಗಿನ ಮಾತುಕತೆಯ ನೇತೃತ್ವ ವಹಿಸಿದ್ದು, ಪ್ರತಿಭಟನಾ ನಿರತ 40 ರೈತ ಸಂಘಟನೆಯ ಮುಖಂಡರ ಜತೆಗಿನ ಜನವರಿ 8ರಂದು ನಡೆಯಲಿರುವ ಮಾತುಕತೆಯ ಫಲಿತಾಂಶವನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ರೈತರ ಪ್ರತಿಭಟನೆಯನ್ನು ಸ್ಥಗಿತಗೊಳಿಸುವ ವಿಷಯದ ಕುರಿತು ಪಂಜಾಬ್ ನ ನಾನಾಸ್ಕರ್ ಗುರುದ್ವಾರ ಮುಖ್ಯಸ್ಥ ಬಾಬಾ ಲಾಖಾ ಅವರಲ್ಲಿ ಮನವಿ ಮಾಡುವ ಪ್ರಸ್ತಾಪದ ಬಗ್ಗೆಯೂ ಪ್ರತಿಕ್ರಿಯೆ ನೀಡಲು ತೋಮರ್ ಈ ಸಂದರ್ಭದಲ್ಲಿ ನಿರಾಕರಿಸಿದರು.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ಸಂಭಾಷಣೆಯ ಆಡಿಯೋ ವೈರಲ್: ಇಂದು ವಿಚಾರಣೆ
ಈಗಲೇ ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಜನವರಿ 8ರಂದು ಮಧ್ಯಾಹ್ನ 2ಗಂಟೆಗೆ ಆರಂಭವಾಗಲಿರುವ ಸಭೆಯಲ್ಲಿ ನಡೆಯುವ ಚರ್ಚೆ ಮತ್ತು ಅದರ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಸಚಿವ ತೋಮರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 7 ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು.