ಮಧುಗಿರಿ: ನಾಡಿನಲ್ಲಿ ಬಂದಿರುವ ಭೀಕರ ನೆರೆ ಹಾವಳಿಯಲ್ಲಿ ನೊಂದವರಿಗೆ ನೆರವು ನೀಡುವ ಸಲುವಾಗಿ ಆ.13ರಂದು ಜೋಳಿಗೆ ಹಿಡಿದು ಭಿಕ್ಷೆ ಎತ್ತಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹಾಯ ಮಾಡುವ ಮನೋ ಭಾವವೇ ನಿಜ ವಾದ ಮಾನವ ಧರ್ಮ. ನೊಂದ ಕುಟುಂಬಕ್ಕೆ ನೆರವಾಗಲು ಇಂದು ನಾವೆಲ್ಲರೂ ಕೈ ಜೊಡಿಸಬೇಕು. ಆ.13ರಂದು ಜೋಳಿಗೆ ಹಿಡಿದು ಪಟ್ಟಣದ ಬೀದಿಗಳಲ್ಲಿ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ, ಡಾ.ಹನುಮಂತನಾಥ ಸ್ವಾಮೀಜಿ ಹಾಗೂ ನಾನು ಭಿಕ್ಷೆ ಬೇಡಲಿದ್ದು, ಭಕ್ತರು ಬಟ್ಟೆ, ಚಾಪೆ, ಹೊದಿಕೆ ಹಾಗೂ ಇತರೆ ದವಸ ಧಾನ್ಯ ನೀಡುವಂತೆ ಮನವಿ ಮಾಡಿದರು.
ಎಲೆರಾಂಪುರದ ಕುಂಚಿಟಿಗ ಒಕ್ಕಲಿಗ ಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಮತನಾಡಿ, ಅತಿವೃಷ್ಟಿ, ಅನಾ ವೃಷ್ಟಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು. ಹಿಂದೆ ಕೊಡುಗು ಸಂತ್ರಸ್ತರಿಗಾಗಿ ಮಧುಗಿರಿ- ಕೊರಟಗೆರೆಯಲ್ಲಿ ಬೇಡಿ ಸಂಗ್ರಹಿಸಿದ್ದ ಸ್ವಲ್ಪ ಹಣ ಹಾಗೂ ಸಿಮೆಂಟ್ ನೀಡುವುದಾಗಿ ಕೆಲವರು ಹೇಳಿದ್ದು, ಈಗ ಸಿಮೆಂಟ್ ಅವಶ್ಯ ಕತೆಯಿಲ್ಲ. ಬದಲಾಗಿ ಅಷ್ಟೇ ಮೊತ್ತದ ದವಸ, ಬಟ್ಟೆ, ಹೊದಿಕೆ ಹಾಗೂ ಇತರೆ ಅಗತ್ಯ ವಸ್ತು ನೀಡುವಂತೆ ಮನವಿ ಮಾಡಿದರು.
ತಗ್ಗಿಹಳ್ಳಿ ಆಶ್ರಮದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ಮಾತನಾಡಿ, ಹುಟ್ಟುವಾಗ ಹಾಗೂ ಹೋಗುವಾಗ ಯಾವುದೇ ಹೊರೆ ತಗೆದುಕೊಂಡು ಹೋಗಲ್ಲ. ನೊಂದವರಿಗೆ ಸಹಾಯ ಮಾಡಿದರೆ ಆ ಕರ್ಮದ ಹೊರೆ ಇಳಿಯುತ್ತದೆ. ಆದ್ದರಿಂದ ನಾಡಿನ ಕೆಲವು ಜನತೆ ಇಂದು ನೆರೆಯಿಂದ ಆಶ್ರಯವಿಲ್ಲದೆ ಅನಾಥರಾಗಿದ್ದಾರೆ. ಅಲ್ಲಿಗೆ ಹಣಕ್ಕಿಂತ ಹೆಚ್ಚಾಗಿ ತಟ್ಟೆ, ಲೋಟ, ಬಟ್ಟೆ, ದವಸ ಹಾಗೂ ಇತರೆ ಆಹಾರ ಪದಾರ್ಥ ಕಳುಹಿಸಬೇಕಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನೆರವಿಗೆ ಧಾವಿಸಬೇಕಿದೆ ಎಂದು ಆಗ್ರಹಿಸಿದರು.
ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಗುಪ್ತ, ಮಧುಗಿರಿ ಸಾರ್ವಜನಿಕ ವೇದಿಕೆಯ ಶ್ರೀಧರ್, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಕುಮಾರ್, ಶಿವಕುಮಾರ್, ಕೋಟೆಕೂಗು ಬಾಬು, ಶಿವಕುಮಾರ್, ಅನಂತಕೃಷ್ಣರಾಜು ಹಾಗೂ ಇತರರು ಇದ್ದರು.