ಶಿರಸಿ: ಡಾ| ಕೆ. ರಮೇಶ ಕಾಮತ್ ವಿಕಾಸ ಫಿಲಂಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶನ ಮಾಡಿದ ಅಪ್ಸರಧಾರಾ ಕೊಂಕಣಿ ಚಿತ್ರವು ಸಂಪೂರ್ಣ ಸಿದ್ಧಗೊಂಡು ಸೆನ್ಸಾರ್ ಬೋರ್ಡಿನ ಮುಂದಿದೆ. ಇದೇ ಆಗಸ್ಟ್‌ನಲ್ಲಿ ಬಿಡುಗಡೆ ಸಿದ್ಧಗೊಂಡಿದೆ.
ಜಿಲ್ಲೆಯ ಶಿರಸಿ ತಾಲೂಕಿನ ದೇವನಳ್ಳಿ, ಯಾಣ ಮತ್ತು ಸಹಸ್ರಲಿಂಗದ ಪರಿಸರದಲ್ಲಿ ಹಾಗೂ ಹೊನ್ನಾವರ ತಾಲೂಕಿನ ಅಪ್ಸರಕೊಂಡದ ಸುಂದರ ಪ್ರಕೃತಿ ರಮ್ಯ ತಾಣದಲ್ಲಿ ಸಂಪೂರ್ಣ ಚಿತ್ರೀಕರಣವಾದ ಈ ಕೊಂಕಣಿ ಚಿತ್ರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಡ್ರದ ಪ್ರಖ್ಯಾತ ಕೊಂಕಣಿ ಕಲಾವಿದರನ್ನು ಏಕತ್ರಗೊಳಿಸಿದ್ದಾರೆ.
ಮುಂಬೈನ ಕೊಂಕಣಿ ಅಭಿನೇತ್ರಿ ವಸುಧಾ ಪ್ರಭು, ಬೆಂಗಳೂರಿನ ಕಲಾವಿದರಾದ ಪಿ.ಆರ್. ನಾಯಕ, ಶ್ರುತಿ ಕಾಮತ್, ಅನಂತ ನಾಯಕ ಸಾಗರಿ, ಉಷಾ ಭಟ್ಟ, ಪ್ರಕಾಶ ಕಿಣಿ, ಪ್ರಭಾ ಕಿಣಿ, ಶೀಲಾ ನಾಯಕ, ನೇಮಿರಾಜ ಜೈನ ಇದ್ದರೆ, ಖ್ಯಾತ ಉದ್ಯಮಿ ಡಾ| ದಯಾನಂದ ಪೈ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಮಂಗಳೂರಿನ ವಿಠೊಬಾ ಭಂಡಾರಕರ, ಯುವರಾಜ ಕಿಣಿ, ಕಾಸರಗೋಡ ಅಶೋಕಕುಮಾರ, ತುಳು, ಕನ್ನಡ ಮತ್ತು ತೆಲುಗು ಫಿಲ್ಮ್ಸ್ಟಾರ್ ಗೋಪಿನಾಥ ಭಟ್ಟ, ಉಷಾ ಭಟ್ಟ ಜೊತೆ ಮೂರು ಮುತ್ತು ನಾಟಕದ ಕುಂದಾಪುರದ ಕುಳ್ಳಪ್ಪು ಸತೀಶ ಪೈ ಹಾಗೂ ಸಂತೋಷ ಪೈ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿರಸಿ, ಸಿದ್ದಾಪುರ ತಾಲೂಕಿನ ಕಲಾವಿದರಿಗೂ ಅವಕಾಶ ನೀಡಿದ್ದಾರೆ. ವಾಸುದೇವ ಶಾನಭಾಗ, ಕೂಡ್ಲ ಆನಂದು ಶಾನಭಾಗ, ವಿಶಾಖ ಇಸಳೂರ, ಆನಂದ ಕಾಮತ್, ಸುಧೀರ ಬೆಂಗ್ರೆ, ವಿವೇಕ ದಿವೇಕರ, ಶಾಂತಾರಾಮ ದಿವೇಕರ, ಸದಾನಂದ ತೇಲಂಗ, ವಾಲ್ಟರ ಡಿಕೊಸ್ಟಾ ಅಲ್ಲದೇ ಹೊನ್ನಾವರದ ಖ್ಯಾತ ಪತ್ರಕರ್ತ ಜಿ.ಯು. ಭಟ್ಟ ಒಳಗೊಂಡಿದ್ದಾರೆ.
ಇದೊಂದು ಮಕ್ಕಳ ಚಿತ್ರವಾಗಿರುವುದರಿಂದ ಸಾರ್ಥಕ ಶೆಣೈ, ಕೇದಾರ ಪೈ, ಸ್ವಾತಿ ಭಟ್ಟ, ಮಾಸ್ಟರ್ ಚಿನ್ಮಯ ಇಂತಹ ಅನೇಕ ಬಾಲ ಕಲಾವಿದರೂ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಡಾ| ರಮೇಶ ಕಾಮತ್‌ರ ಧರ್ಮಪತ್ನಿ ಕಿರಣ್ಮಯಿ ಕೂಡ ಬಣ್ಣ ಬಳಿದುಕೊಂಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ಕ್ಯಾಮರಾ ಗೌರೀ ವೆಂಕಟೇಶ, ಅರುಣ ಥೊಮಸ್, ಸಂಗೀತ ನಿರ್ದೇಶನ-ರಾಜ ಭಾಸ್ಕರ ಇದ್ದಾರೆ. ಅನನ್ಯಾ ಭಗತ, ಮುರಲೀಧರ ಶೆಣೈ, ರಾಜೇಶ ಪಡಿಯಾರ ಹಿನ್ನೆಲೆ ಗಾಯನ ಹಾಡಿದ್ದಾರೆ. ಗೀತರಚನೆ ಪಯ್ಯನೂರು ರಮೇಶ ಪೈ ಹಾಗೂ ಸಂಭಾಷಣೆಯನ್ನು ಎಂ. ವೆಂಕಟೇಶ ಬಾಳಿಗಾ ಬರೆದಿದ್ದಾರೆ.
ಈ ಚಿತ್ರವು ಕೊಂಕಣಿ ಚಲನಚಿತ್ರ ಕ್ಷೇತ್ರದ ಅನೇಕ ಸರ್ವ ಪ್ರಥಮಗಳಿಗೆ ಬಾಧ್ಯಸ್ತವಾಗಿದೆ. ಇದು ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಕೊಂಕಣಿ ಸಿನೇಮಾ ಆಗಿದ್ದು ಇಜಿಪ್ತನ ಕೈರೋ ನಗರದಲ್ಲಿರುವ ವಿಶ್ವವಿಖ್ಯಾತ ಸಿಧೀಂಕ್ಸ್ ಹಾಗೂ ಪಿರ್ಯಾಮಿಡ್ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಲ್ಲಿನವರೇ ಆದ ಹೆಸ್ಸೇನ ಹೊಸ್ಸಾಮ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ಫಿಲಂನಲ್ಲಿ ಕೊಂಕಣೀ ಭಾಷೆಯಲ್ಲಿ ಮೊದಲ ಬಾರಿಗೆ ರ್ಯಾಪ್‌ಸಾಂಗ್ ಅಳವಡಿಸಲಾಗಿದೆ. ಈ ಚಿತ್ರವನ್ನು ಭಾಗಶಃ ಥ್ರೀಡಿ ತಂತ್ರಜ್ಞಾನದಲ್ಲಿ ನೋಡಬಹುದಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಮೊದಲ ಜಿಎಸ್‌ಬಿ ಕೊಂಕಣಿ ಚಿತ್ರವಾಗಿದೆ.
ಇವರು ಮೂಲತಃ ಸಾಲಿಗ್ರಾಮದ ಕಾರ್ಕಡದವರಾಗಿದ್ದು ವೃತ್ತಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರ ಆಗಿದ್ದರೂ ಪ್ರವೃತ್ತಿಯಿಂದ ಸಿನೆಮಾ ಲೋಕದಲ್ಲಿ ಕಾರ್ಯ ಮಾಡುತ್ತಿದ್ದಾರೆ. ಅನೇಕ ಚಿತ್ರಗಳನ್ನೂ ಕೊಡುಗೆಯಾಗಿ ನೀಡಿದ್ದಾರೆ. ಇವರು ಸ್ವತಃ ವಾಸ್ತು ತಜ್ಞರೂ ಹೌದು.