ಮಳವಳ್ಳಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದಿದ್ದು, ಇದು ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಡಾ.ಕೆ.ಅನ್ನದಾನಿ ಅಭಿಮಾನಿಗಳ ಬಳಗ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾಸಂಸ್ಥೆ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದ್ಯದಲ್ಲಿಯೇ ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಈಗಾಗಲೇಸಿದ್ಧತೆ ನಡೆಸಿದ್ದು, ಕಾರ್ಯಕರ್ತರು ಮಾನಸಿಕವಾಗಿಸಿದ್ಧರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸಭೆ ನಡೆಸಲಾಗಿದೆ.ಮೈಸೂರು ಭಾಗದಲ್ಲಿ ಜೆಡಿಎಸ್ ಇನ್ನೂ ಬಲಿಷ್ಠವಾಗಿದೆ ಎಂಬುವುದಕ್ಕೆ ಇತ್ತಿಚೀಗೆ ನಡೆದ ಗ್ರಾಪಂ ಚುನವಾಣೆಯೇ ಸಾಕ್ಷಿ ಎಂದರು.
ಶಾಸಕ ಡಾ.ಕೆ.ಅನ್ನದಾನಿ, ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿ ಸಮಾಜದಲ್ಲಿ ನಡೆಯುವುದು ತಪ್ಪು ಎಂದರೇ ಜನರು ಖಂಡಿಸುತ್ತಾರೆ. ರಾಜಕೀಯದಲ್ಲಿ ಜನತಾ ನ್ಯಾಯಾಲಯವೇ ಅಂತಿಮ, ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕಾನೂನಿಗೆ ಬೆಲೆ ಸಿಗಬೇಕು ಎಂದರೆ ಹಣವಿಲ್ಲದೇ ಇರುವ ಸಾಮಾನ್ಯ ಪ್ರಜೆಗೂ ನ್ಯಾಯ ದೊರೆಯಬೇಕು ಎಂದರು.
ಆರೋಗ್ಯ ಶಿಬಿರದ ನೇತೃತ್ವವನ್ನು ಶಾಸಕರ ಪುತ್ರ ಆಂಶು ಅನ್ನದಾನಿ ವಹಿಸಿದ್ದರು. ಶಾಸಕ ಡಾ.ಕೆ.ಅನ್ನದಾನಿ ಅವರ 54ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಕೋಟೆ ಬೀದಿಯ ಗಂಗಾಧರೇಶ್ವರಸ್ವಾಮಿದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.ವಿಧಾನ ಪರಿಷತ್ ಸದಸ್ಯ
ಅಪ್ಪಾಜಿಗೌಡ, ಜಿಪಂ ಸದಸ್ಯ ರವಿ ಕಂಸಾಗರ, ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಡಿ.ರಮೇಶ್, ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದ ಕುಮಾರ್, ಸದಸ್ಯರಾದ ಪ್ರಶಾಂತ್ ಕುಮಾರ್, ನೂರುಲ್ಲಾ, ಸಿದ್ದರಾಜು, ಪ್ರಮೀಳಾ ಇದ್ದರು.