Advertisement
ಉಡುಪಿ ಜಿಲ್ಲಾಧಿಕಾರಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್‌ಪಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಉಡುಪಿ ವಿ.ಭಾ ಕ್ಷೇತ್ರದ ಚುನಾವಣಾಧಿಕಾರಿ ಕೆಂಪೇಗೌಡ ಅವರ ಮೇಲುಸ್ತುವಾರಿಯಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಬೆಳಗ್ಗೆ ಆರಂಭಗೊಂಡಿತು. ಮಧ್ಯಾಹ್ನ 2.30ರ ವೇಳೆಗೆ ಸುಮಾರು 2,000 ಮಂದಿ ಅಧಿಕಾರಿ,ಸಿಬಂದಿ ಮತದಾನ ಕೇಂದ್ರಗಳಿಗೆ ಬಸ್, ಮ್ಯಾಕ್ಸಿಕ್ಯಾಬ್‌ಗಳಲ್ಲಿ ತೆರಳಿದರು.
ತಮಗೆ ನಿಯೋಜಿತವಾದ ಮತಗಟ್ಟೆಯ ಮಾಹಿತಿ ಪಡೆಯಲು ಈ ಹಿಂದೆ ಕೆಲವೊಮ್ಮೆ ಅಧಿಕಾರಿಗಳು,ಸಿಬಂದಿ ಪರದಾಡುವ ಸ್ಥಿತಿ ಇತ್ತು. ಮತಗಟ್ಟೆಗಳಿಗೆ ತೆರಳುವ ವಾಹನಗಳ ಬಗ್ಗೆಯೂ ಗೊಂದಲ ಉಂಟಾಗುತ್ತಿತ್ತು. ಆದರೆ ಈ ಬಾರಿ ಇಂತಹ ಗೊಂದಲಗಳಿಗೆ ಅವಕಾಶವಿರಲಿಲ್ಲ. ಬಸ್‌ಗಳ ರೂಟ್, ಮತಗಟ್ಟೆಯ ವಿವರವನ್ನೊಳಗೊಂಡ ಮಾಹಿತಿ ಫಲಕವನ್ನು ಕೂಡ ಅಳವಡಿಸಲಾಗಿತ್ತು. ಬಸ್‌ಗಳು ಮಸ್ಟರಿಂಗ್ ಕೇಂದ್ರದ ಎದುರಿನ ಮೈದಾನದಲ್ಲಿ ಒಂದೇ ಕಡೆ ನಿಲುಗಡೆಯಾಗಲು ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ತಹಶೀಲ್ದಾರ್ ಅವರು ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು.
Related Articles
Advertisement
ಪ್ರತಿ ಮತಗಟ್ಟೆಗೆ 1,800 ರೂ.ಪ್ರತಿ ಮತಗಟ್ಟೆಗೂ ಸಿಬಂದಿಗೆ ಉಪಾಹಾರ ಮತ್ತು ಊಟಕ್ಕಾಗಿ ಈಗಾಗಲೇ 1,800 ರೂ.ಗಳನ್ನು ಮತಗಟ್ಟೆ (ಶಾಲೆ) ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ. ಅಲ್ಲದೆ ಪ್ರತಿ ಮತಗಟ್ಟೆಗೆ 20 ಲೀಟರ್‌ನ 2 ಕ್ಯಾನ್ ಕುಡಿಯುವ ನೀರು ಒದಗಿಸಲಾಗುತ್ತದೆ. ಅಗತ್ಯಬಿದ್ದರೆ ಹೆಚ್ಚುವರಿ ನೀರು ಒದಗಿಸಲಾಗುತ್ತದೆ. ಸಿಬಂದಿಗೆ ಮೆಡಿಕೆಲ್ ಕಿಟ್‌ನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು. ಬ್ಯಾಂಡೇಜ್ ಹಾಕಿದರೂ ಕುಗ್ಗದ ಉತ್ಸಾಹ
ಚುನಾವಣಾ ಕರ್ತವ್ಯ ದೃಢಪತ್ರ(ಇಡಿಸಿ) ಪಡೆಯಲು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಶೀರೂರಿನ ಶಾಲೆಯೊಂದರ ಶಿಕ್ಷಕ ಗಿರೀಶ್ ಅವರು ಇತ್ತೀಚೆಗೆ ಮನೆ ಸಮೀಪ ಬಿದ್ದು ಕೈ ಮುರಿತವಾಗಿತ್ತು. ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಚುನಾವಣಾ ಕರ್ತವ್ಯಕ್ಕಾಗಿ ಆಗಮಿಸಿದ್ದರು. “ನನಗೆ ವಿನಾಯಿತಿ ಕೇಳಿದರೆ ಕೊಡುತ್ತಾರೆ. ಆದರೆ ನಾನು ಆಸಕ್ತಿಯಿಂದ ಕರ್ತವ್ಯಕ್ಕೆ ಬಂದಿದ್ದೇನೆ. ನನ್ನಿಂದ ಆಗುವ ಕೆಲಸ ಮಾಡುತ್ತೇನೆ. ಈ ಹಿಂದೆ ಹಲವು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೆ’ ಎಂದು ಗಿರೀಶ್ ಪ್ರತಿಕ್ರಿಯಿಸಿದರು.