ಪಾವಗಡ: ನಾನು ಶಾಸಕನಾಗಿ ಎರಡು ಅವಧಿಯಲ್ಲಿ ಹಾಗೂ ಶಾಸಕ ವೆಂಕಟರಮಣಪ್ಪ ಶಾಸಕರಾಗಿ ನಾಲ್ಕೂ ಅವಧಿಯಲ್ಲಿ ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಬಹಿರಂಗ ಚರ್ಚೆಗೆ ವೆಂಕಟರಮಣಪ್ಪ ಅವರೊಂದಿಗೆ ಚರ್ಚಿಸಲು ನಾನು ಸಿದ್ಧ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರು, 5 ದಿನಗಳಿಂದೆ ತಾಲೂಕಿನ ವಿರುಪಸಮುದ್ರ ಗ್ರಾಮದ ಸಭೆಯಲ್ಲಿ ಶಾಸಕರು ತಾಲೂಕಿನ ಅಭಿವೃದ್ಧಿ ಬಗ್ಗೆ ಮಾಜಿ ಶಾಸಕರೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಶಾಸಕರು ದಿನಾಂಕ ನಿಗದಿಪಡಿಸಿದರೆ ನಾನು ಚರ್ಚೆಗೆ ಬರಲು ಸಿದ್ಧ, ಇದಕ್ಕೆ ಪತ್ರಕರ್ತರು ಒಂದು ವೇದಿಕೆ ಕಲ್ಪಿಸಬೇಕು. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರು ಸುಳ್ಳಿನ ಕಥೆ ಹೇಳುವುದರಲ್ಲಿ ನಿಪುಣರು ಎಂದು ಹೇಳಿದ್ದರು ಹಾಗೂ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ಹೇಳಿದ್ದಾರೆ. ಆದರೆ, ಪಾವಗಡ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವುದು ಏನು?, ತಂದೆ ಶಾಸಕ, ಮಗ ಜಿಪಂ ಸದಸ್ಯ ಹಾಗೂ ಪಕ್ಷದ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ, ಇದು ಅಪ್ಪ ಮಕ್ಕಳ ಪಕ್ಷ ಅಲ್ಲವೇ ಎಂದು ಪ್ರಶ್ನಿಸಿದರು.
ಅರ್ಹತೆ ಇದೆಯೇ?: ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವಷ್ಟು ಶಾಸಕ ವೆಂಕಟರಮಣಪ್ಪ ಅವರಿಗೆ ಅರ್ಹತೆ ಇದೆಯೇ ಎಂದು ಆಲೋಚಿಸಲಿ, ಪಟ್ಟಣದಲ್ಲಿ ಬಸ್ ಡಿಪೋ, 8 ಮೊರಾರ್ಜಿ ಶಾಲೆ, 8 ಪ್ರೌಢ ಶಾಲೆ ಹೊಸದಾಗಿ ಮಂಜೂರು, ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು, ಅಗ್ನಿಶಾಮಕ ದಳದ ಠಾಣೆ, ಸಮುದಾಯ ಆರೋಗ್ಯ ಕೇಂದ್ರಗಳನ್ನು ತಿರುಮಣಿ, ಲಿಂಗದಹಳ್ಳಿ, ಕೆ.ಟಿ.ಹಳ್ಳಿ ಗ್ರಾಮಗಳಲ್ಲಿ ಸೇರಿದಂತೆ ತಾಲೂಕಿನಾದ್ಯಂತ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂದರು.
ಸೋಲಿನ ಭೀತಿಯಿಂದ ಅಪಪ್ರಚಾರ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಶಾಸಕ ವೆಂಕಟರಮಣಪ್ಪ ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಪಕ್ಷದ ಮುಖಂಡರೇ ಸುದ್ದಿಗೋಷ್ಠಿಗಳಲ್ಲಿ ವೆಂಕಟರಮಣಪ್ಪನವರ ಅವಧಿಯಲ್ಲಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಬೇಡಿ ಎಂದು ಹೇಳಿದ್ದರೆ, ನಮ್ಮ ಪಕ್ಷದ ಶಾಸಕರ ಅಡಳಿತ ಅವಧಿಯಲ್ಲಿ ನಡೆದ ಚರ್ಚೆ ಬಗ್ಗೆ ಪಕ್ಷದಿಂದ ನಾವು ಸಿದ್ಧ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಎನ್ .ಎ.ಈರಣ್ಣ, ಗೌರವ ಅಧ್ಯಕ್ಷ ರಾಜಶೇಖರಪ್ಪ, ರೈತ ಘಟಕದ ಅಧ್ಯಕ್ಷ ಗಂಗಧಾರ ನಾಯ್ಡು, ವಕ್ತಾರ ಅಕ್ಕಲಪ್ಪನಾಯ್ಡು ಮಾತನಾಡಿದರು.
ಮುಖಂಡರಾದ ಕೋಟಗುಡ್ಡ ಅಂಜಿನಪ್ಪ, ಜಯರಾಮರೆಡ್ಡಿ, ಪಾಲಾನಾಯಕ, ತಾಳೇಮರದಹಳ್ಳಿ ಅಂಜಿ, ಕಾವಲಗೇರಿ ರಾಮಾಂಜಿ, ರಾಜಶೇಖರರೆಡ್ಡಿ, ಅಂಜನ್, ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶಾಸಕರಾಗಿ ದಿನಾಂಕ ಬಹಿರಂಗ ಚರ್ಚೆಗೆ ನಿಗದಿಪಡಿಸುವ ಜಾವಾಬ್ದಾರಿ ಅವರ ಮೇಲಿದೆ. ಇವರು ಸಚಿವರಾದಾಗ ತಾಲೂಕಿಗೆ ಬಂದ 6,800 ಮನೆಗಳು ಮಂಜೂರಾಗಿ ರುವುದನ್ನು ರದ್ದುಪಡಿಸಿದರೂ ಪ್ರಶ್ನೆ ಮಾಡಿಲ್ಲ, ವಿಧಾನಸಭೆಯಲ್ಲಿ ತಾಲೂ ಕಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿರುವ ಚರ್ಚೆಗಳ ಬಗ್ಗೆ ಕೂಡ ಚರ್ಚೆಗೆ ಬರಲಿ.
-ಕೆ.ಎಂ.ತಿಮ್ಮರಾಯಪ್ಪ, ಮಾಜಿ ಶಾಸಕ