“ಬಿಗ್‌ಬಾಸ್’ ರನ್ನರ್‌ಅಪ್ ಆಗಿ ಹೊರಬಂದ ದಿವಾಕರ್, “ರೇಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಈಗ ಆ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರತಂಡ, ಚಿತ್ರದ ಟ್ರೇಲರ್ ರಿಲೀಸ್ ಮಾಡಿತು. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಹೇಮಂತ್‌ಕೃಷ್ಣ ಅವರಿಗೆ “ರೇಸ್’ ಕನ್ನಡದ ಮೊದಲ ನಿರ್ದೇಶನದ ಚಿತ್ರ. ಕನ್ನಡದಲ್ಲೊಂದು ಚಿತ್ರ ಮಾಡಬೇಕು ಅಂತ ನಿರ್ಧರಿಸಿದ್ದ ಹೇಮಂತ್ ಕೃಷ್ಣ ಅವರು, ನಿರ್ಮಾಪಕ ವೆಂಕಟೇಶ್ ಅವರಿಗೆ ಕಥೆ ಹೇಳಿದ್ದೇ ತಡ, ಅವರು ಸಿನಿಮಾ ನಿರ್ಮಾಣಕ್ಕೆ ಮುಂದಾಗಿ, ಈಗ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಅವಕಾಶ ಕೊಟ್ಟವರಿಗೆ, ಸಿನಿಮಾದಲ್ಲಿ ನಟಿಸಿದವರಿಗೆ, ಚಿತ್ರವಾಗಲು ಸಹಕರಿಸಿದ ತಂಡಕ್ಕೆ ಥ್ಯಾಂಕ್ಸ್ ಹೇಳಿ ಸುಮ್ಮನಾದರು.
ಅವರಷ್ಟೇ ಅಲ್ಲ, ದಿವಾಕರ್ ಕೂಡ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳಲಿಲ್ಲ. ಅವರ ಪಾತ್ರದ ಬಗ್ಗೆಯೂ ತಿಳಿಸಲಿಲ್ಲ. “ತುಂಬ ವರ್ಷಗಳ ಕನಸು ನನಸಾಗಿದೆ. ನಾನು ಬೆಂಗಳೂರಿಗೆ ಬಂದಿದ್ದೇ ಹೀರೋ ಆಗಬೇಕು ಅಂತ. ಆದರೆ, ಪ್ರಯತ್ನ ಈಡೇರಲಿಲ್ಲ. “ಬಿಗ್‌ಬಾಸ್’ ಮನೆಗೆ ಹೋಗಿದ್ದು ಸಹ ಆಕಸ್ಮಿಕ. ಜನರ ಪ್ರೀತಿ ಸಿಕ್ಕಿತು. ಗುರುತಿಸಿಕೊಂಡೆ. ಈಗ “ರೇಸ್’ ಚಿತ್ರದಲ್ಲಿ ನಟಿಸಿದ್ದೇನೆ. ನಿಮ್ಮಗಳ ಸಹಕಾರ ಇರಲಿ’ ಎಂದರು ದಿವಾಕರ್.
ಇದುವರೆಗೆ ಏಳೆಂಟು ಚಿತ್ರಗಳಲ್ಲಿ ನಟಿಸಿದ್ದ ಯುವ ನಟ ಸಂತೋಷ್ ಕೂಡ ಚಿತ್ರದಲ್ಲಿ ನಾಲ್ಕು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ದಿವಾಕರ್‌ಗೆ ಈ ಚಿತ್ರ ಯಶಸ್ಸು ತಂದುಕೊಡಲಿ. ನಿರ್ದೇಶಕರು, ಒಳ್ಳೆಯ ಚಿತ್ರ ಮಾಡಿದ್ದಾರೆ. ಈ ಸಿನಿಮಾ ನನಗೂ ಯಶಸ್ಸು ತಂದುಕೊಡುತ್ತೆ ಎಂಬ ನಂಬಿಕೆ ಇದೆ. ನಾನು ಏಳೆಂಟು ಚಿತ್ರಗಳಲ್ಲಿ ನಟಿಸಿರುವುದು ಮುಖ್ಯ ಅಲ್ಲ. ಗೆಲ್ಲುವುದು ಮುಖ್ಯ. ಈ “ರೇಸ್’ನಲ್ಲಿ ಆ ಗೆಲುವನ್ನು ನಿರೀಕ್ಷಿಸುತ್ತೇನೆ’ ಎಂದರು ಸಂತೋಷ್.
ಮತ್ತೂಬ್ಬ ನಟ ನಕುಲ್ ಅವರಿಗೂ ಇಲ್ಲಿ ನೆಗೆಟಿವ್ ಶೇಡ್ ಪಾತ್ರ ಇದೆಯಂತೆ. ಅದೊಂದು ರೀತಿ ಚಾಲೆಂಜಿಂಗ್ ಪಾತ್ರ ಎನ್ನುವ ಅವರು, ಒಂದೇ ಫ್ರೆàಂನಲ್ಲಿ ಎರಡು ಮುಖ ಇರುವಂತಹ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುತ್ತಾರೆ ಅವರು. ಚಿತ್ರದ ನಾಯಕಿ ರಕ್ಷಾ ಶೆಣೈ ಅವರಿಲ್ಲಿ, ಅಂಜಲಿ ಎಂಬ ಬಬ್ಲಿ ಹುಡುಗಿ ಪಾತ್ರ ಮಾಡಿದ್ದಾರಂತೆ. “ಒಂದೊಳ್ಳೆಯ ಕಥೆಯಲ್ಲಿ ನಾನೂ ಇದ್ದೇನೆ ಎಂಬ ಖುಷಿ ಇದೆ. “ರೇಸ್’ ಅಂದಾಕ್ಷಣ, ನಾನಾ ರೀತಿಯ ಕಲ್ಪನೆ ಬರುತ್ತೆ. ಆ ಎಲ್ಲಾ ಕಲ್ಪನೆಗೆ ತಕ್ಕಂತೆಯೇ ಈ ಚಿತ್ರ ಮೂಡಿಬಂದಿದೆ’ ಎನ್ನುತ್ತಾರೆ ರಕ್ಷಾ ಶೆಣೈ.
ಲಹರಿ ಆಡಿಯೋ ಮುಖ್ಯಸ್ಥ ವೇಲು ಅವರಿಗೆ “ರೇಸ್’ ಅಂದಾಕ್ಷಣ, ಹಿಂದಿ ಚಿತ್ರ ನೆನಪಾಯಿತಂತೆ. ಬಾಲಿವುಡ್‌ನಲ್ಲಿ ಬಂದ “ರೇಸ್’ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲೂ “ರೇಸ್’ ಗೆಲುವು ತಂದುಕೊಡಲಿ. ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲಾ ಕ್ಷೇತ್ರದಲ್ಲೂ “ರೇಸ್’ ಇದ್ದೇ ಇರುತ್ತೆ. ಅಲ್ಲಿ ಗೆಲ್ಲಬೇಕಷ್ಟೇ’ ಅಂದರು ವೇಲು. ನಿರ್ದೇಶಕರಾದ ಸಂತೋಷ್ ಆನಂದರಾಮ್ ಹಾಗು ಮಾದೇಶ್ ಚಿತ್ರತಂಡಕ್ಕೆ ಶುಭಕೋರಿದರು.