ಕುಂದಾಪುರ: ತನಗೆ ದೊರೆತ ಒಂದು ವರ್ಷ 8 ತಿಂಗಳ ಅವಧಿಯ ಸಾಧನೆಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಅವರು ಬುಧವಾರ ಸಂಜೆ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.ನಾನು ಮಾಡಿದಷ್ಟು ಅಭಿವೃದ್ಧಿ ಕಾರ್ಯ ಯಾವ ಪುರುಷ ಸಂಸದರೂ ಮಾಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಕುರಿತು ಕೇಳಿದಾಗ, ಅವರು ಯಾರ ಕುರಿತು ಹೇಳಿಕೆ ನೀಡಿದ್ದಾರೋ ತಿಳಿದಿಲ್ಲ. ಮನೋರಮಾ ಮಧ್ವರಾಜ್ ಹೊರತುಪಡಿಸಿ ಇತರ ಎಲ್ಲರೂ ಇಲ್ಲಿ ಪುರುಷ ಸಂಸದರೇ ಇದ್ದುದು. ಟಿ.ಎ. ಪೈ, ಐ.ಎಂ. ಜಯರಾಮ ಶೆಟ್ಟಿ, ಡಿ.ವಿ. ಸದಾನಂದ ಗೌಡರಂತಹ ನಾಯಕರು ಕೂಡ ಸಂಸದರಾಗಿದ್ದರು. ಅವರ ಹೇಳಿಕೆ ನನ್ನ ಕುರಿತಾಗಿದ್ದರೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಉಡುಪಿಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಬ್ರಹ್ಮಾವರ ಪಾಸ್‌ಪೋರ್ಟ್ ಸಲಹಾ ಕೇಂದ್ರ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಬಸೂÅರು ಮೂರುಕೈ ಅಂಡರ್‌ಪಾಸ್, ಗಂಗೊಳ್ಳಿ ಬ್ರೇಕ್ ವಾಟರ್ ಹೀಗೆ ಅನೇಕ ಕೆಲಸಗಳಾಗಿವೆ ಎಂದರು.
ಗೋ ಬ್ಯಾಕ್ ಶೋಭಾ ಅಭಿಯಾನ ಟಿಕೆಟ್ ಆಕಾಂಕ್ಷಿಗಳ ಕೆಲಸ ಎಂದು ಶೋಭಾ ಪದೇ ಪದೇ ಹೇಳುತ್ತಿರುವ ಕುರಿತು ಕೇಳಿದಾಗ, ಎರಡೂ ಜಿಲ್ಲೆಗಳಲ್ಲಿ ಇಂತಹ ಅಭಿಯಾನ ನಡೆಸುವಷ್ಟು ಸಾಮರ್ಥ್ಯ ನನ್ನ ಬಳಿ ಇದೆ ಎಂದು ಅವರು ಒಪ್ಪಿಕೊಂಡಂತಾಯಿತು. ನನ್ನ ಕುರಿತಾಗಿ ಹೇಳಿಕೊಳ್ಳಬಹುದು; ಹಾಗಂತ ಇನ್ನೊಬ್ಬರನ್ನು ವಿರೋಧಿಸಿ ಎಂದು ಎತ್ತಿಕಟ್ಟುವುದು ಸುಲಭದ ಮಾತಲ್ಲ. ನಾನು ಅಂತಹ ಕೆಲಸ ಮಾಡಿಲ್ಲ. ನನ್ನ ಬಳಿ ಮಾತುಕತೆ ಆಡಿದ ಬಳಿಕ ಹಾಗೆ ಹೇಳಿದ್ದು ನನಗೂ ನೋವಾಗಿದೆ. ಚುನಾವಣ ಪ್ರಕ್ರಿಯೆ ಆರಂಭವಾಗಿದ್ದು ಅವರು ಇಂತಹ ಹೇಳಿಕೆ ಕೊಡುವುದು ಶೋಭೆಯಲ್ಲ ಎಂದರು.
ನಿಮ್ಮ ಬೆಂಬಲಿಗರಿಗೆ, ನಿರ್ದಿಷ್ಟ ಸಮುದಾಯಕ್ಕೆ ಅಸಮಾಧಾನ ಉಂಟಾಗಿದೆ ಎಂಬ ಮಾತಿದೆ ಎಂಬ ಪ್ರಶ್ನೆಗೆ, ಎಲ್ಲ ವರ್ಗದವರಿಗೂ ನೋವಾ ಗಿದೆ ಎಂದರು. ಬೇರೆ ಪಕ್ಷಗಳಿಂದ ಆಹ್ವಾನ ಇತ್ತೇ ಎಂದಾಗ, ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಸಂಪರ್ಕಿಸಿದ್ದವು. ಆದರೆ ಬಿಜೆಪಿ ಯಲ್ಲೇ ಇರಲು ತೀರ್ಮಾನಿಸಿದ್ದೇನೆ ಎಂದರು.
ಟಿಕೆಟ್ ದೊರೆಯದ ಮುನಿಸಿದೆಯೇ ಎಂದಾಗ, ನಾನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ್ದೇನೆ. ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ಹುಬ್ಬಳ್ಳಿ, ಉಡುಪಿ ಮೊದಲಾದೆಡೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದೇನೆ. ನನಗೆ ಪಕ್ಷದಲ್ಲಿ ಯಾವುದೇ ಹುದ್ದೆಗಳಿಲ್ಲದ ಕಾರಣ ಆಹ್ವಾನಿಸಿದ ಕಡೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದು ಉಳಿದೆಡೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಬಿಜೆಪಿಯಲ್ಲಿ ನಿಮ್ಮನ್ನು ಎಸ್.ಎಂ. ಕೃಷ್ಣ ಅವರಂತೆ ಮೂಲೆಗುಂಪು ಮಾಡಲಾಗಿದೆಯೇ ಎಂದು ಕೇಳಿದಾಗ, ಅವರಿಗೂ ನನಗೂ ಹೋಲಿಕೆ ಸಲ್ಲದು. ನಾನು ಜಯಪ್ರಕಾಶ್ ಹೆಗ್ಡೆ ಆಗಿಯೇ ಇರಲು ಬಯಸುತ್ತೇನೆ. ಜನರ ಕೆಲಸ ಮಾಡಲು ಅಧಿಕಾರದ ಅಗತ್ಯ ಇಲ್ಲ ಎಂದರು.