ಬೆಂಗಳೂರು: ಕಳೆದ ಕಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ನೂರಾರು ಪ್ರಾಂಶುಪಾಲರ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ನಿಯಮಗಳನ್ನು ಪ್ರಕಟಿಸಿದೆ.
ರಾಜ್ಯದ 411 ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಳಲ್ಲಿ 390 ಕಾಲೇಜಿನಲ್ಲಿ ಕಾಯಂ ಪ್ರಾಂಶುಪಾಲರಿಲ್ಲ ಮತ್ತು ಕಳೆದ ಅನೇಕ ವರ್ಷದಿಂದ ಪ್ರಾಂಶುಪಾಲರ ನೇಮಕಾತಿಯೂ ನಡೆದಿರಲಿಲ್ಲ. ಪ್ರಭಾರ ಪ್ರಾಂಶುಪಾಲರೇ ಎಲ್ಲ ರೀತಿಯ ಆಡಳಿತಾತ್ಮಕ ಕಾರ್ಯವನ್ನು ನಿಭಾಯಿಸುತ್ತಿದ್ದರು. ಈಗ ರಾಜ್ಯ ಸರ್ಕಾರ ಪ್ರಾಂಶುಪಾಲರ ನೇಮಕಾತಿಗಾಗಿ ಕರಡು ನಿಯಮ ರೂಪಿಸಿ ಬಿಡುಗಡೆ ಮಾಡಿದೆ.
ಇದೇ ಮಾದರಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರ ನೇಮಕಾತಿಗೂ ಸಂಬಂಧಿಸಿದಂತೆ ಕರಡು ನಿಯ ಮ ವನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಈ ಎರಡು ನೇಮಕಾತಿ ಪ್ರಕ್ರಿಯೆಯನ್ನು ಪ್ರವೇಶ ಪರೀಕ್ಷೆ ಮೂಲಕ ಮಾಡಿಕೊಳ್ಳಲಾ ಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ಕರಡು ನಿಯಮದಲ್ಲಿ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆಯುವ ಅಂಕದ ಆಧಾರದಲ್ಲಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲು ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ನೇಮಕಾತಿ ಪ್ರಾಧಿಕಾರವನ್ನು ರಚನೆ ಮಾಡಲಾಗುತ್ತದೆ. ಈ ನೇಮಕಾತಿ ಪ್ರಾಧಿಕಾರವು ಕೆಇಎ ನಡೆಸುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕದ ಆಧಾರದಲ್ಲಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಿದೆ.
ಉಪನ್ಯಾಸಕರ ನೇಮಕಾತಿ ನಿಯಮ: ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಯ ನೇಮಕಾತಿ ಸಂಬಂಧಿಸಿ ದಂತೆಯೂ ಕರಡು ನಿಯಮವನ್ನು ಸರ್ಕಾರ ಸಿದ್ಧಪಡಿಸಿದೆ. ಉಪನ್ಯಾಸಕರ ನೇಮಕಾತಿಯನ್ನು ಪ್ರವೇಶ ಪರೀಕ್ಷೆ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿ ಕಾರದಿಂದ ನಡೆಸಲಾಗುತ್ತದೆ. ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಮೆರಿಟ್ ಲಿಸ್ಟ್ ಅನ್ನು ಇಲಾಖೆಯ ಆಯುಕ್ತರ ನೇತೃತ್ವದ ನೇಮಕಾತಿ ಪ್ರಾಧಿಕಾರ ಸಿದ್ಧಪಡಿಸಲಿದೆ. ಸದ್ಯ 3800 ಉಪನ್ಯಾಸಕರ ಹುದ್ದೆಗಳು ಖಾಲಿಯಿದೆ. ಕರಡು ನಿಯಮವೇ ಅಂತಿಮವಾದರೆ ಪ್ರವೇಶ ಪರೀಕ್ಷೆ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.