ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ನೀಡಿದ ಅನುದಾನ ಹಾಗೂ ಮಾಡಿದ ಕಾಮಗಾರಿ ಕುರಿತು ಕಾಂಗ್ರೆಸ್ ಮುಖಂಡರಾದ ಡಾ| ಮಹೇಶ ನಾಲವಾಡ ಹಾಗೂ ವಸಂತ ಲದವಾ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ ಹಾಗೂ ಸುಧೀರ ಸರಾಫ ಸವಾಲು ಹಾಕಿದ್ದಾರೆ.
ಜಗದೀಶ ಶೆಟ್ಟರ ಅವರಿಗೆ ಕಾಂಗ್ರೆಸ್ ಸರಕಾರದ ಸಾಧನೆಯ ಬಗ್ಗೆ ಮಾಹಿತಿ ಇಲ್ಲವೆಂದು ಮಹೇಶ ನಾಲವಾಡ ಹಾಗೂ ವಸಂತ ಲದವಾ ಆರೋಪಿಸಿದ್ದು, ಕಾಂಗ್ರೆಸ್ ಸರಕಾರದ ಸಾಧನೆಯ ಕೈಪಿಡಿಯನ್ನು ಅಂಚೆ ಮೂಲಕ ಕಳಿಸಿಕೊಡುವುದಾಗಿ ಹೇಳಿಕೆ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಅಧಿ ಕಾರದಲ್ಲಿದ್ದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ನೀಡಿದ ಅನುದಾನದ ಕುರಿತು ಬಹಿರಂಗ ಚರ್ಚೆ ನಡೆಯಲಿ. ಮಹೇಶ ನಾಲವಾಡ ಅವರಿಗೆ ರಾಜ್ಯ ಸರಕಾರದಿಂದ ಮಹಾನಗರ ಪಾಲಿಕೆಗಾದ ಅನ್ಯಾಯದ ಬಗ್ಗೆ ಮಾಹಿತಿಯಿಲ್ಲ.
ಜಗದೀಶ ಶೆಟ್ಟರ ಅವರಿಗೆ ಮಾಹಿತಿ ಇಲ್ಲವೆಂದು ಹೇಳಿರುವುದು ಹಾಸ್ಯಸ್ಪದ. ಹುಬ್ಬಳ್ಳಿ-ಧಾರವಾಡ ಮಹಾನಗರದ ರಸ್ತೆಗಳು ಹದಗೆಟ್ಟಿರುವುದಕ್ಕೆ ಕಾರಣ ಪಾಲಿಕೆಯ ಅನುದಾನ ನಿವೃತ್ತ ನೌಕರರ ಪಿಂಚಣಿ ನೀಡಲು ಖರ್ಚಾಗುತ್ತಿದೆ. ರಾಜ್ಯ ಸರಕಾರ ಮಹಾನಗರ ಪಾಲಿಕೆಗೆ ತಾವು ನೀಡಬೇಕಾದ ನಿವೃತ್ತಿ ನೌಕರರ ಬಾಕಿ ವೇತನವನ್ನು ನೀಡುತ್ತಿಲ್ಲ.
ಪ್ರತಿ ತಿಂಗಳು 3 ಕೋಟಿ ರೂ. ಹಣವನ್ನು ಪಾಲಿಕೆಯ ನಿವೃತ್ತ ನೌಕರರಿಗೆ ನೀಡಲಾಗುತ್ತಿದೆ. ಮಹೇಶ ನಾಲವಾಡ ಹಾಗೂ ವಸಂತ ಲದವಾ ಅವರು ತಮ್ಮ ನಾಯಕರನ್ನು ಮೆಚ್ಚಿಸಲು ಸುದ್ದಿಗೋಷ್ಠಿ ನಡೆಸದೆ ಬಹಿರಂಗ ಚರ್ಚೆಗೆ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.