ಕೆಂಗೇರಿ: “ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಿರುವ 5 ಘನ ತ್ಯಾಜ್ಯ ಘಟಕಗಳಿಗೆ ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಳ ಮೀಸಲಿರಿಸಿದ್ದು, ವೃಥಾ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈ ಕುರಿತು ಯಾವುದೇ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ,’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಸವಾಲೆಸೆದರು.
ಯಶವಂತಪುರ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಬ್ಲಾಕ್ ಮೇಯ್ಲರ್ ಎನ್.ಆರ್.ರಮೇಶ್ ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸಕಾರಣವಾಗಿ ಆರೋಪ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ,’ ಎಂದರು.
ತನಿಖೆಗೆ ಸಿದ್ಧ: “ಅಕ್ರಮ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪದಲ್ಲಿ ನನ್ನ ವಿರುದ್ಧ ಐ.ಟಿ ಅಧಿಕಾರಿಗಳಿಗೆ ದೂರು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಆದರೆ ಶುದ್ಧ ಹಸ್ತನಾಗಿರುವ ನನಗೆ ಯಾವುದೇ ಭಯವಿಲ್ಲ. ನೂರು ಇಲಾಖೆಯಿಂದ ತನಿಖೆ ನಡೆದರೂ ಎದುರಿಸಲು ನಾನು ಸಿದ್ಧ,’ ಎಂದು ಹೇಳಿದರು.
ನಾನು ಹೆದರುವುದು ಕ್ಷೇತ್ರದ ಜನತೆಗೆ ಮಾತ್ರ. ಚುನಾವಣೆಯಲ್ಲಿ ಎರಡು ಬಾರಿ ಸೋತರೂ ಮೂರನೇ ಬಾರಿಗೆ ನನ್ನನ್ನು ಗೆಲ್ಲಿಸಿದ್ದಾರೆ. ಜನರು ನನ್ನ ಮೇಲೆ ಇರಿಸಿರುವ ನಂಬಿಕೆ, ವಿಶ್ವಾಸ ಹಾಗೂ ಅಭಿಮಾನಕ್ಕೆ ಚಿರಋಣಿಯಾಗಿದ್ದು, ಈಗ ಅವರ ಋಣ ತೀರಿಸುವುದೇ ನನ್ನ ಕರ್ತವ್ಯ,’ ಎಂದರು.
ಈ ವೇಳೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಜೆಡಿಎಸ್ ಮುಖಂಡ ಬ್ರೆಡ್ ಮಂಜುನಾಥ್ ಮಾತನಾಡಿ, ಶಾಸಕರ ದೂರದೃಷ್ಟಿಯಿಂದ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಯಾವುದೇ ನಿರೀಕ್ಷೆ ಇಲ್ಲದೆ ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದರು.
ಚೋಳನಾಯಕನಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಡಿ.ಹನುಮಂತಯ್ಯ, ಬೆಂಗಳೂರು ದಕ್ಷಿಣ ತಾಲ್ಲುಕು ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಎಲ್.ಚಂದ್ರಶೇಖರ್, ತಾವರೆಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಳಮ್ಮ, ಮಾಜಿ ಅಧ್ಯಕ್ಷ ಟಿ.ವಿ.ಸಿದ್ದಪ್ಪ, ಮುಖಂಡರಾದ ಕೆಂಪೇಗೌಡ, ರಾಮಚಂದ್ರ, ಲಕ್ಷಿಶ್ ಗೌಡ, ಜಯರಾಂ, ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬ್ರೆಡ್ ಮಂಜುನಾಥ್ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.