Advertisement

6000 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ: ಸುಧಾಕರ್

10:23 PM Jul 08, 2020 | Sriram |

ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದ್ದು ಕೋವಿಡ್‌ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Advertisement

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 6,000 ದಿಂದ 7,000 ಹಾಸಿಗೆಗಳನ್ನು ತಮ್ಮದೇ ಆದ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಗಳಲ್ಲಿ ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಅವರು ಉಪಸ್ಥಿತರಿದ್ದರು.

ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ನರ್ಸಿಂಗ್ ಹೋಂಗಳಲ್ಲಿ ಲಭ್ಯವಿರುವ ಜನರಲ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಸೌಲಭ್ಯ ಕುರಿತಾದ ಕ್ಷಣಕ್ಷಣದ ಮಾಹಿತಿ ಪಡೆಯುವುದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ರಿಯಲ್ ಟೈಂ ಡಾಟಾ ಆಧಾರದ ಮೇಲೆ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುವುದು. ಇದರಿಂದ ರೋಗಿಗಳು ಒಂದು ಅಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರಿಗೆ 500 ಅಂಬುಲೆನ್ಸ್
ಆಂಬುಲೆನ್ಸ್ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬೆಂಗಳೂರಿನಲ್ಲಿ ಈ ಮೊದಲು 400 ಆಂಬುಲೆನ್ಸ್ ನಿಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಯವರು ಇದರ ಅವಶ್ಯಕತೆಯನ್ನು ಪರಿಗಣಿಸಿ 500 ಅಂಬುಲೆನ್ಸ್ ಬಳಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ 24 ಗಂಟೆಗಳಲ್ಲಿ ಎಲ್ಲಾ ಅಂಬುಲೆನ್ಸ್ ಗಳು ಸೇವೆಗೆ ಲಭ್ಯವಾಗಲಿವೆ ಎಂದು ಹೇಳಿದರು.

ಆಂಬುಲೆನ್ಸ್ ಅವಶ್ಯಕತೆ ಕೇವಲ ತೀವ್ರತರವಾದ ಲಕ್ಷಣ ಇರುವವರಿಗೆ ಮಾತ್ರ ಇದ್ದು ಲಕ್ಷಣರಹಿತರು ಟೆಂಪೋ ಟ್ರಾವೆಲರ್ ಗಳನ್ನು ಬಳಸಬಹುದಾಗಿದೆ ಎಂದು ಹೇಳಿದರು.

Advertisement

ಆಂಬುಲೆನ್ಸ್ ನಿರ್ವಹಣೆಗೂ ಕೇಂದ್ರೀಕೃತ ವ್ಯವಸ್ಥೆ ಬರಲಿದ್ದು ಡ್ಯಾಶ್ ಬೋರ್ಡ್ ಮೂಲಕ ಯಾವ ಸೋಂಕಿತರನ್ನು ಎಲ್ಲಿಗೆ ಸಾಗಿಸಬೇಕು ಎನ್ನುವುದನ್ನು ರಿಯಲ್ ಟೈಂ ಡಾಟಾ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಸಚಿವರು ಹೇಳಿದರು.

ವಾರಾಂತ್ಯದೊಳಗೆ ರಾಜ್ಯದಲ್ಲಿ ಆಂಟಿಜೆನ್ ಟೆಸ್ಟ್ ಕಿಟ್‌ಗಳು ಸಂಖ್ಯೆಯಲ್ಲಿ ಲಭ್ಯವಿರಲಿದ್ದು, 1 ಲಕ್ಷ ಆಂಟಿಜೆನ್ ಟೆಸ್ಟ್ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವರು ತಿಳಿಸಿದರು.

ಜೆಜೆ‌ಎಂಎಂಸಿ ಶಿಷ್ಯವೇತನ
ದಾವಣಗೆರೆಯ ಜೆಜೆ‌ಎಂಎಂಸಿ ಕಾಲೇಜಿನ ಸ್ನಾತಕೋತ್ತರ ವೈದ್ಯವಿದ್ಯಾರ್ಥಿಗಳ ಮತ್ತು ಗೃಹವೈದ್ಯರ ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸಚಿವ ಸುಧಾಕರ್ ಅವರು, ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ತಾವು ಈಗಾಗಲೇ 3 ಬಾರಿ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳೊಂದಿಗೂ ಕೂಡ ಚರ್ಚಿಸಿದ್ದೇನೆ. ಸನ್ಮಾನ್ಯ ಮುಖ್ಯಮಂತ್ರಿಗಳು ಶಿಷ್ಯವೇತನ ಕೂಡಲೆ ಬಿಡುಗಡೆ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ. ಎಂದು ಹೇಳಿದರು.

ಕೋವಿಡ್‌ ವಿರುದ್ಧ ಹೋರಾಡಲು ಪುಣ್ಯಕೋಟಿ ಹಸುವಿನ ಪ್ರಾಮಾಣಿಕತೆ ಮತ್ತು ಸ್ವಯಂಪ್ರೇರಣೆಯ ಸಾಮಾಜಿಕ ಸಂದೇಶ

ಜನರಲ್ಲಿ ಧೈರ್ಯ, ಪ್ರಾಮಾಣಿಕತೆ ಮತ್ತು ಸ್ವಯಂಪ್ರೇರಣಾ ಮನೋಭಾವ ಮೂಡಿಸಲು ಸಚಿವ ಸುಧಾಕರ್ ಪುಣ್ಯಕೋಟಿ ಹಸುವಿನ ನಿದರ್ಶನ ನೀಡಿದ್ದಾರೆ. ನಮ್ಮ ನಾಡಿನ ಅತ್ಯಂತ ಜನಪ್ರಿಯವಾದ ಈ ಕಥೆಯಲ್ಲಿ ಪುಣ್ಯಕೋಟಿ ಹಸು ಅತ್ಯಂತ ಪ್ರಾಮಾಣಿಕವಾಗಿ ಕೊಟ್ಟ ಮಾತಿನಂತೆ ಹುಲಿಯ ಹತ್ತಿರ ಹೋಗಿ ತನ್ನನ್ನು ಒಪ್ಪಿಸಿಕೊಳ್ಳುತ್ತದೆ. ಆ ಪ್ರಾಮಾಣಿಕತೆಗೆ ಹುಲಿಯಂತಹ ಕ್ರೂರಮೃಗವೇ ಕರಗಿಹೋಗುತ್ತದೆ. ಪ್ರಾಮಾಣಿಕತೆಗೆ ಅಷ್ಟು ಶಕ್ತಿ ಇದೆ. ಧೈರ್ಯಕ್ಕೆ ಅಷ್ಟು ಶಕ್ತಿ ಇದೆ. ಅದೇ ರೀತಿಯಲ್ಲಿ ನಾವೂ ಕೂಡ ಜಾವಾಬ್ದಾರಿಯಿಂದ ಭಯಪಡದೆ ನಡೆದುಕೊಂಡರೆ ಕೊರೋನಾವನ್ನು ಖಂಡಿತ ಮಣಿಸಬಹುದು ಎಂದು ಸಚಿವರು ಹೇಳಿದರು.

ಸೋಂಕಿತರ ಪತ್ತೆ ಕಾರ್ಯ, ರೋಗ ಲಕ್ಷಣ ಇದ್ದರೆ ಭಯಪಡದೆ, ಮುಚ್ಚಿಡದೆ ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸುವುದು, ಕ್ವಾರಂಟೈನ್ ನಲ್ಲಿರುವವರು ಮನೆಯಿಂದ ಹೊರಬರದಿರುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯುವುದು ಮತ್ತು ಇತರೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಇಷ್ಟೇ ನಾವು ಪ್ರಾಮಾಣಿಕತೆಯಿಂದ ಮಾಡಬೇಕಾಗಿರುವ ಕಾರ್ಯಗಳು ಎಂದು ಸಚಿವ ಸುಧಾಕರ್ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next