ಒಂದು ಕಾಲದಲ್ಲಿ ಓದಲು ಸಾಕಷ್ಟು ಸಮಯವಿತ್ತು, ಆದರೆ, ಪುಸ್ತಕಗಳಿರಲಿಲ್ಲ; ಈಗ ಪುಸ್ತಕಗಳಿವೆ, ಆದರೆ ಸಮಯವಿಲ್ಲ ! ನಾನು ನನ್ನ ಜೀವನಾನುಭವಗಳನ್ನೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅದು ನನ್ನ ಸಮಕಾಲೀನರದೂ ಆಗಿರಬಹುದು. ಓದಲು ಬರೆಯಲು ಕಲಿತು, ಪಾಠಗಳನ್ನು ಅಭ್ಯಾಸ ಮಾಡುತ್ತ, ಈ ಪಾಠಗಳಿಂದ ಆಚೆಗೂ ಓದುವುದಕ್ಕೆ ಇದೆ ಎನ್ನುವ ಅರಿವಾದ ಕಾಲದಲ್ಲಿ ಅಂಥ ಆಚೆಗಿನ ಓದಿಗೆ ಸಾಕಷ್ಟು ಅನುಕೂಲವಾಗಲಿ, ಪ್ರೋತ್ಸಾಹವಾಗಲಿ ನನಗೆ ಇರಲಿಲ್ಲ. ಆ ತರದ ಓದಿನ ಬಗ್ಗೆ ಮನೆಯವರಿಗೆ ಹೆಚ್ಚಿನ ಅರಿವೂ ಇರಲಿಲ್ಲ ಅನ್ನಿಸುತ್ತದೆ; ಮನೆಯಲ್ಲಿ ಪುಸ್ತಕಗಳೇ ಅಪರೂಪವಾಗಿದ್ದವು. ಅವೆಲ್ಲ ಅನಗತ್ಯ ಎಂದು ಅವರ ಮತವಾಗಿತ್ತು ; ಅನಗತ್ಯ ಮಾತ್ರವಲ್ಲ, ಅನಪೇಕ್ಷಣೀಯ ಎಂದು ಕೂಡ. ಯಾಕೆಂದರೆ ಪಠ್ಯೇತರ ಓದು ಕೂಡ ಮಕ್ಕಳನ್ನು ಕೆಟ್ಟ ದಾರಿಗೆ ತಳ್ಳುತ್ತವೆ ಎಂದು ನಂಬಿದವರು ಅವರು.
Advertisement
ಆದರೂ ನನ್ನಂಥವರು ಚಂದಮಾಮ, ಬಾಲಮಿತ್ರ ಮುಂತಾದ ಪತ್ರಿಕೆಗಳನ್ನು ಎÇÉೆಲ್ಲಿಂದಲೋ ದೊರಕಿಸಿಕೊಂಡು ಓದುತ್ತಿದ್ದೇವು . ಅವುಗಳನ್ನು ಕೊಂಡುಕೊಳ್ಳುವ ಕಾಸು ನಮ್ಮಲ್ಲಿ ಇರುತ್ತಿರಲಿಲ್ಲ. ಮಕ್ಕಳ ಕೈಗೆ ಕಾಸು ಕೊಡಬಾರದು ಎನ್ನುವುದು ನಿಯಮವಾಗಿತ್ತು. ಯಾರ ಕೈಯಲ್ಲಾದರೂ ಇಂಥದೊಂದು ಪತ್ರಿಕೆ ಕಂಡರೆ ಅವರ ಹಿಂದೆ ಬಿದ್ದು ಪಡಕೊಳ್ಳುವುದು- ಅವರು ಕೊಟ್ಟರೆ- ಇಲ್ಲದಿದ್ದರೆ ಇಲ್ಲ. ಶಾಲೆಯಲ್ಲಿ ಲೈಬ್ರರಿ ಎನ್ನುವ ಒಂದು ಇಲಾಖೆಯೇನೋ ಇತ್ತು ; ಆದರೆ ಅಲ್ಲಿ ವಾರಕ್ಕೆ ಒಮ್ಮೆ ಮಾತ್ರ ಪುಸ್ತಕಗಳನ್ನು ಕೊಡುವುದು ಕ್ರಮ. ಅದೂ ಲೈಬ್ರರಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮರ್ಜಿಯ ಮೇಲೆ. ಕನ್ನಡದಲ್ಲಿ ಪಾಕೆಟ್ ಎಡಿಶನ್‌ನ ಕಾದಂಬರಿಗಳು ಪ್ರಕಟವಾಗುತ್ತಿದ್ದ ಕಾಲ ಅದು: ಅನಕೃ, ತರಾಸು, ಎಂ. ರಾಮಮೂರ್ತಿ ಮುಂತಾದವರು ಬರೆಯುತ್ತಿದ್ದರು; ಶಿವರಾಮ ಕಾರಂತರಂತೂ ಇದ್ದೇ ಇದ್ದರು.
Related Articles
Advertisement
ಊರಿಗೆ ಮೊದ ಮೊದಲು ದಿನಪತ್ರಿಕೆಗಳೇ ಬರುತ್ತಿರಲಿಲ್ಲ. ಆದ್ದರಿಂದ ನಮಗೆ “ಸುದ್ದಿ’ ಎನ್ನುವುದರ ಆಧುನಿಕ ಕಲ್ಪನೆ ಇರಲಿಲ್ಲ. ಸುದ್ದಿ ಎಂದರೆ ನಮಗೆ ಕಿವಿಯಿಂದ ಕಿವಿಗೆ ಬಿದ್ದ ಸಂಗತಿ. ನಂತರ ಮಂಗಳೂರಿನಲ್ಲಿ ನವಭಾರತ ಎಂಬ ದಿನಪತ್ರಿಕೆ ಶುರುವಾಯಿತು. ಆದರೆ ಅದನ್ನು ಓದಲು ಯಾರೂ ನಮಗೆ ಪ್ರೇರೇಪಿಸಲಿಲ್ಲ. ಜೀವನ, ಜಯಕರ್ನಾಟಕ ಮತ್ತು ಜಯಂತಿ ಮಾಸಪತ್ರಿಕೆಗಳು ಕೆಲವು ಸಲ ಕಣ್ಣಿಗೆ ಬೀಳುತ್ತಿದ್ದವು. ನಂತರ ಚಿತ್ರಗುಪ್ತ, ಪ್ರಪಂಚ, ಪ್ರಜಾಮತ ಕಾಣಿಸಿದವು. ಆ ಮೂಲಕ ಆಧುನಿಕ ಸಾಹಿತ್ಯದ ಆರಂಭಿಕ ಪರಿಚಯ ಸ್ವಲ್ಪ ಮಟ್ಟಿಗೆ ಆಯಿತು ಮತ್ತು ನನ್ನ ಕಾಲದ ಮಕ್ಕಳಿಗೆ ಓದಿನ ರುಚಿ ಹತ್ತಿಸಿದ್ದರಲ್ಲಿ ಈ ಪತ್ರಿಕೆಗಳ ಪಾತ್ರ ಬಹು ದೊಡ್ಡದಾಗಿತ್ತು. ಅವುಗಳನ್ನು ನಡೆಸುತ್ತಿದ್ದ ವ್ಯಕ್ತಿಗಳಿಗೆ ನಾವೆಂದೂ ಋಣಿಗಳೇ. ನಮ್ಮ ಶಾಲೆಗೆ ಬೇಂದ್ರೆ, ಕಾರಂತ, ಬೆಟಗೇರಿ ಕೃಷ್ಣಶರ್ಮ ಮುಂತಾದ ಸಾಹಿತಿಗಳು ಭೇಟಿ ಕೊಟ್ಟುದು ಕೂಡ ನೆನಪಿದೆ. ನಿಧಾನವಾಗಿ ನಮ್ಮ ಊರು ಮತ್ತು ನಾವು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೆವು. ಒಂದು ಪಾರಂಪರಿಕ ಸಮಾಜ ಮೌಖೀಕ ಸಂಸ್ಕೃತಿಯಿಂದ ಅಕ್ಷರ ಸಂಸ್ಕೃತಿಗೆ ಕಾಲಿಡುತ್ತಿದ್ದ ಸುದೀರ್ಘ ತೊಳಲಾಟದ ಒಂದು ಘಟ್ಟವಾಗಿತ್ತು ಅದು.
ಈ ಮಾತುಗಳನ್ನು ನಾನು ಬರೆಯುತ್ತಿರುವಾಗ ಅರ್ಧ ಶತಮಾನದಷ್ಟು ಕಾಲ ಕಳೆದಿದೆ. ಈಗ ನೋಡಿದರೆ ಇಂದಿನ ವಿದ್ಯಾರ್ಥಿಗಳಿಗೆ ಪಾಪ, ಪುಸ್ತಕಗಳೇ ಒಂದು ಹೊರೆಯಾಗಿವೆ! ಪಾಠ ಓದುವುದಕ್ಕೇ ವೇಳೆಯಿಲ್ಲದ ಅವರಿನ್ನು ಪಠ್ಯೇತರ ಪುಸ್ತಕಗಳನ್ನು ಓದುತ್ತಾರೆಯೇ? ಚಂದಮಾಮ, ಬಾಲಮಿತ್ರ ಮುಂತಾದವು ಈಗ ಇಲ್ಲ. ಅವುಗಳ ಸ್ಥಾನದಲ್ಲಿ ಕಾಮಿಕ್ಸ್ ಬಂದಿರಬಹುದು. ಅದರೆ ಮಕ್ಕಳು ಮಿಕ್ಕ ಸಮಯವನ್ನು ಟೀ, ಟ್ಯಾಬ್ಲೆಟ್, ಈ-ಬುಕ್, ಸೆಲ್‌ಫೋನ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳೆಯಲು ಬಯಸುತ್ತಾರೆ. ಆಟೋಟಗಳು ಮತ್ತು ಸ್ಪರ್ಧೆಗಳು ಕೂಡ ಅಲ್ಲಿ ದೊರಕುತ್ತವೆ.
ಆದರೂ ಓದಿಗೆ ಹೋಲಿಸಿದರೆ ಇವು ಹೆಚ್ಚು “ನಿಷ್ಕ್ರಿಯ’ ಮಾಧ್ಯಮಗಳಾಗಿರುತ್ತವೆ. ಅಕ್ಷರ ಮಾಧ್ಯಮದ ವೈಶಿಷ್ಟ್ಯದ ಬಗ್ಗೆ ಚೆಕ್-ಫ್ರೆಂಚ್ ಬರಹಗಾರ ಮಿಲನ್ ಕುಂದೇರ ತನ್ನ Art of the Novel ನಲ್ಲಿ ಈ ಹಿಂದೆಯೇ ಬರೆದಿದ್ದ. ಉದಾಹರಣೆಗೆ, ಒಂದು ದೊಡ್ಡ ಪರ್ವತ ಇದೆ ಎಂದುಕೊಳ್ಳಿ. ಅಕ್ಷರ ಮಾಧ್ಯಮ ಅದು ಎಷ್ಟು ದೊಡ್ಡದಿದೆ ಎನ್ನುವುದನ್ನು ನಮ್ಮ ಕಲ್ಪನೆಗೆ ಬಿಡುತ್ತದೆ; ದೃಶ್ಯ ಮಾಧ್ಯಮ ಅದನ್ನು ತೋರಿಸಿಕೊಡುತ್ತದೆ. “ಕೆಲವು ಸಂದರ್ಭಗಳಲ್ಲಿ ಹೀಗೆ ತೋರಿಸಿಕೊಡುವುದು ಅಗತ್ಯವಾಗಿರಬಹುದು; ಆದರೆ ಉಳಿದ ಸಂದರ್ಭದಲ್ಲಿ ಅದನ್ನು ನಮ್ಮ ಕಲ್ಪನೆಗೆ ಬಿಡುವುದೇ ಒಳ್ಳೆಯದು’ ಎನ್ನುತ್ತಾನೆ ಕುಂದೇರ. ಆದರೆ ಈ ಮಲ್ಟಿ ಮೀಡಿಯಾ ಯುಗ ಕಲ್ಪನೆಯನ್ನು ಅನುಮಾನದಿಂದ ನೋಡುತ್ತದೆ ಎನಿಸುತ್ತದೆ. ಚಿತ್ರ ಮತ್ತು ಧ್ವನಿಯ ಮೂಲಕ ತೋರಿಸುವುದು, ಕೇಳಿಸುವುದು ಸಾಧ್ಯವಿರುವಾಗ “ಅಸಮರ್ಪಕ’ವಾದ ಬರಹದಲ್ಲಿ ಸೂಚಿಸುವ ಪ್ರಯತ್ನ ಯಾಕೆ ಎನ್ನುವುದು ಬಹುಶಃ ಅದರ ವಾದ. ಆದರೂ ಮನುಷ್ಯನ ಮೂಲಭೂತ ಗುಣವಾದ ಕಲ್ಪನೆಯನ್ನು ನಿದ್ರಿಸಲು ಬಿಟ್ಟರೆ ಹೇಗೆ?
ಇಂದಿನ ತಲೆಮಾರಿಗೆ ಪುಸ್ತಕಗಳ ಕೊರತೆಯಿಲ್ಲ, ಆದರೆ ಸಮಯದ ಕೊರತೆಯಿದೆ. ದಿನದ ಹೆಚ್ಚಿನ ವೇಳೆಯನ್ನೂ ಕಚೇರಿ ಕೆಲಸದಲ್ಲಿ ಮತ್ತು ಪ್ರಯಾಣದಲ್ಲಿ ಕಳೆಯುವ ಜನರಿಗೆ ಓದುವ ವ್ಯವಧಾನವೆಲ್ಲಿದೆ? ಇರುವ ಸಮಯವನ್ನು ಅವರು ಇಂಟರ್‌ನೆಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಾರೆ ಅಥವಾ ಪಾರ್ಟಿಗಳಲ್ಲಿ. ಅದು ಅವರ ಅಗತ್ಯ.
ಸದ್ಯದ ಯುಗದ ಲಕ್ಷಣಗಳು: ವೇಗ, ಮಾಹಿತಿ, ಮೌಖೀಕತೆ ಮತ್ತು ಪೈಪೋಟಿ. ಇವೆಲ್ಲವೂ ಓದಿಗೆ ವಿರುದ್ಧ. ವೇಗ ನಮ್ಮನ್ನು ತಲ್ಲಣಕ್ಕೆ ಒಳಗಾಗಿಸುತ್ತದೆ; ಕೇವಲ ಮಾಹಿತಿಯೇ ಜ್ಞಾನವಲ್ಲ; ಮೌಖೀಕತೆ ಜಾಸ್ತಿಯಾದರೆ ಅಕ್ಷರ ಅನಗತ್ಯವೆನಿಸುತ್ತದೆ; ಇನ್ನು ಪೈಪೋಟಿ ಚಿಂತನೆಯನ್ನು ನಾಶಪಡಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ಓದು, ಅದೂ ನಿರುದ್ದಿಶ್ಯವಾದ ಓದು, ಅನಗತ್ಯ ಎನಿಸುತ್ತದೆ. ಇನ್ನು ಎರಡನೆಯ ಬಾರಿಯ ಓದಂತೂ ಇಂದು ಅಸಾಧ್ಯವೇ ಆಗಿಬಿಟ್ಟಿದೆ. ನಮ್ಮ ಜೀವನ ಪ್ರಯೋಜನ-ಪ್ರೇರಿತವಾದರೆ, ಯಾವುದರಿಂದ ಏನು ಲಾಭ ಎಂದು ಕೇಳುತ್ತೇವೆ. ಕಾಲೇಜು ಓದಿದ್ದೇವೆ, ಕೆಲಸ ಸಿಕ್ಕಿದೆ, ಇನ್ನು ಯಾಕೆ ಓದಬೇಕು ಎಂದು ನನ್ನನ್ನು ಕೇಳಿದವರಿ¨ªಾರೆ. ಇದಕ್ಕೆ ಫ್ರಾನ್ಸಿಸ್ ಬೇಕನ್ ನೀಡಿದುದಕ್ಕಿಂತ ಚೆನ್ನಾದ ಉತ್ತರ ನನ್ನ ಬಳಿ ಇಲ್ಲ.
– ಕೆ. ವಿ. ತಿರುಮಲೇಶ್