Advertisement

ಓದು ಕಾಟಾಚಾರವಾಗದೆ ಬದುಕಿನ ಭಾಗವಾಗಲಿ

09:48 PM Jan 20, 2020 | Lakshmi GovindaRaj |

ಮೈಸೂರು: ವಿದ್ಯಾರ್ಥಿಗಳು ಓದನ್ನು ಬದುಕಿನ ಒಂದು ಭಾಗವನ್ನಾಗಿಸಿಕೊಳ್ಳಬೇಕು ಎಂದು ಅಪರಾಧ ಮತ್ತು ಸಂಚಾರ ವ್ಯವಸ್ಥೆ ಉಪ ಪೊಲೀಸ್‌ ಆಯುಕ್ತೆ ಬಿ.ಟಿ. ಕವಿತಾ ಹೇಳಿದರು. ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಮನೋವಿಜ್ಞಾನ ವಿಭಾಗ ಹಾಗೂ ಐಕ್ಯೂಎಸ್‌ಸಿ ಸಹಯೋಗದಲ್ಲಿ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಬಹಳಷ್ಟು ಸಾಧಕರು ಕಷ್ಟದಿಂದ ಬೆಳೆದು ಬಂದವರಾಗಿದ್ದಾರೆ. ಮನೆಯಲ್ಲಿ ಕೆಲಸವಿದೆ, ಓದಲು ಕಷ್ಟ ಎಂಬ ಕಾರಣಗಳನ್ನು ಬಿಟ್ಟು ಬಿಡುವಿ ವೇಳೆಯಲ್ಲಿ ಅಭ್ಯಾಸದತ್ತ ಗಮನಕೊಡಬೇಕು. ಹೇಗಿದ್ದರೂ ಮದುವೆಯಾಗಿ ಗಂಡನ ಮನೆಗೆ ಹೋಗುತ್ತೇನೆ. ಹೆಚ್ಚು ಓದಿ ಪ್ರಯೋಜನವೇನು ಎಂಬ ಭಾವನೆ ಬಿಟ್ಟು ಬಿಡಿ. ಮದುವೆಯೇ ಜೀವನದ ಅಂತಿಮವಲ್ಲ. ಅದು ಜೀವನದ ಒಂದು ಭಾಗವಷ್ಟೆ. ನಾವು ಹೆಚ್ಚು ಓದಿಕೊಂಡಿದ್ದರೆ, ಮುಂದೆ ಉತ್ತಮವಾಗಿ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಮೊಬೈಲ್‌ಗ‌ಳು ಜನರನ್ನು ಹಾಳು ಮಾಡಿರುವಷ್ಟು ಮತ್ಯಾವ ಸಾಧನವೂ ಮಾಡಿಲ್ಲ. ವಿದ್ಯಾರ್ಥಿಗಳು ಮೊಬೈಲ್‌ ಹಿಡಿದುಕೊಂಡರೆ ಇಡೀ ಜಗತ್ತನ್ನೇ ಮರೆಯುತ್ತಾರೆ. ಮೊಬೈಲ್‌, ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಅಂಟಿಕೊಳ್ಳದೇ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಓದು ವ್ಯಕ್ತಿತ್ವ ವಿಕಾಸನಕ್ಕೆ ಹಾಗೂ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಓದುವುದನ್ನು ಬದುಕಿನ ಭಾಗವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮೈಸೂರು ಕಾರಾಗೃಹ ಸಿಬ್ಬಂದಿ ತರಬೇತಿ ಕೇಂದ್ರದ ಪ್ರಾಂಶುಪಾಲ ಮಹೇಶ್‌ ಕುಮಾರ್‌ ಎಸ್‌. ಜಿಗಣಿ ಮಾತನಾಡಿ, ಬಹಳಷ್ಟು ವಿದ್ಯಾರ್ಥಿನಿಯರು ಪದವಿಯನ್ನೂ ಪೂರ್ಣಗೊಳಿಸದೇ ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಅದಕ್ಕೆ ಅವರ ಕೌಟುಂಬಿ ಮತ್ತು ವೈಯಕ್ತಿಕ ಕಾರಣಗಳು ಇರುತ್ತವೆ. ಈ ಬಗ್ಗೆ ಅವರ ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಓದುವಾಗಲೇ ಮಕ್ಕಳಿಗೆ ಅಂಗಾಂಗಳ ಬಗ್ಗೆ ಸಾಮಾನ್ಯ ಜ್ಞಾನವನ್ನು ಬೇಧವಿಲ್ಲದೇ ತಿಳಿಸಿಕೊಡಬೇಕು. ಜೊತೆಗೆ ಕಾನೂನಿನ ಪರಿಚಯ ಮಾಡಿಕೊಡಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಮುನ್ನಡೆಯುತ್ತಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಯಥೇತ್ಛವಾಗಿ ಬಳಸುವ ಬದಲು ಸ್ವಯಂ ನಿಯಂತ್ರಣ ಹಾಕಿಕೊಂಡು ದಿನಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Advertisement

ಪೋಷಕರು ತಮ್ಮ ಮಕ್ಕಳಿಗೆ ಯಾವ ವಯಸ್ಸಿಗೆ ಏನು ಕೊಡಿಸಬೇಕು. ಯಾವ ಪ್ರಮಾಣದಲ್ಲಿ ಎಂಬುದರ ಬಗ್ಗೆ ಅರಿವು ಹೊಂದಿರಬೇಕು. ಜೊತೆಗೆ ಮಕ್ಕಳ ವಿಷಯದಲ್ಲಿ ಪೋಷಕರು ಹೆಚ್ಚು ಗಮನ ನೀಡಬೇಕು. ಮಕ್ಕಳ ಮೊಬೈಲನ್ನು ಆಗಾಗ ಪರಿಶೀಲಿಸಿ ಮುಂದೆ ಆಗಬಹುದಾದ ಕಹಿ ಘಟನೆ ತಪ್ಪಿಸಬಹುದು ಎಂದರು.

ಮಕ್ಕಳಿಗೆ ನೀತಿ ಪಾಠ: ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ. ವಿಜಯ್‌ ಕುಮಾರ್‌ ಮಾತನಾಡಿ, ವಿದ್ಯಾರ್ಥಿನಿಯರು ತರಗತಿ ಇಲ್ಲದ ಸಮಯದಲ್ಲಿ ಗ್ರಂಥಾಲಯಕ್ಕೆ ತೆರಳಿ ಪುಸ್ತಕ, ಸಾಪ್ತಾಹಿಕ ಹಾಗೂ ದಿನಪತ್ರಿಕೆಗಳನ್ನು ಓದಬೇಕು. ಇಂದಿನ ಬಹುಪಾಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಹೆಚ್ಚು ಪ್ರಶ್ನೆ ಕೇಳಲಾಗುತ್ತದೆ. ಓದಿನ ಶ್ರದ್ಧೆ ಬೆಳೆಸಿಕೊಂಡರೆ ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂದರು.

ಪೋಷಕರ ಕಣ್ಣೀರು: ಸಂವಾದದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಹೆಣ್ಣು ಮಕ್ಕಳ ಸಮಸ್ಯೆ ಕುರಿತು ಚರ್ಚೆ ನಡೆಸಿದರು. ಈ ವೇಳೆ ವಿದ್ಯಾರ್ಥಿನಿ ತಾಯಿಯೊಬ್ಬರು, ನಾನು ದೇವರಾಜ ಮಾರುಕಟ್ಟೆಯಲ್ಲಿ ಹೂ ಮಾರಾಟ ಮಾಡಿ ಮಗಳನ್ನು ಓದಿಸುತ್ತಿದ್ದೇನೆ. ಮುಂದೆ ಅವಳೆ ನನಗೆ ಆಧಾರವಾಗುತ್ತಾಳೆ ಎಂಬ ನಿರೀಕ್ಷೆಯಿತ್ತು.

ಆದರೆ ಅವಳು ಫೇಲ್‌ ಆಗಿದ್ದಾಳೆ. ಈಗ ದೇವರಾಜ ಮಾರುಕಟ್ಟೆ ಕೆಡುವುತ್ತಿದ್ದಾರೆ. ಹೀಗಾದರೆ ನನ್ನ ಮಗಳನ್ನು ಹೇಗೆ ಓದಿಸಲಿ, ಜೀವನ ಹೇಗೆ ಎಂಬ ಬಗ್ಗೆ ನನ್ನ ಮಗಳಿಗೆ ತಿಳಿ ಹೇಳಿ ಎಂದು ಕಣ್ಣೀರಿಟ್ಟರು. ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್‌. ಮನೋನ್ಮಣಿ, ಐಕ್ಯೂಎಸ್‌ಸಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ವೇಣುಗೋಪಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next