ಬೆಂಗಳೂರು: ದೈನಂದಿನ ಒತ್ತಡದಿಂದ ಹೊರಬರಲು ಓದಿನತ್ತ ಮುಖ ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾ.ವಿಜಯ ಸಮರ್ಥ ಅಭಿಪ್ರಾಯ ಪಟ್ಟರು.
ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕ ಓದು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗಲಿದೆ ಎಂದರು.
ಚುಟುಕು ಸಾಹಿತ್ಯಕ್ಕೆ ಸುಮಾರು ಒಂದು ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಚುಟುಕು ಸಾಹಿತ್ಯ ಓದು ಮನುಷ್ಯನನ್ನು ಆರೋಗ್ಯವಾಗಿಡುತ್ತದೆ. ಚುಟುಕು ಸಾಹಿತ್ಯಕ್ಕೆ ಅನೇಕ ಗಣ್ಯರು ಕೊಡುಗೆ ನೀಡಿದ್ದು, ಅವರ ಸಾಧನೆ ಸ್ಮರಣೀಯ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಕುತ್ತು ಬಂದಿದ್ದು ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿದೆ. ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು ಕನ್ನಡಕ್ಕೆ ಅಪಾಯ ಎದುರಾಗಿದೆ. ಈ ಸಂಬಂಧ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮನ್ನಾಳುವ ಸರ್ಕಾರಗಳು ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ಕನ್ನಡಿಗರ ಸ್ನೇಹಕೂಟದ ಅಧ್ಯಕ್ಷ ಕೆ.ಹನುಮಂತಯ್ಯ ಮಾತನಾಡಿ, ಕನ್ನಡಕ್ಕಾಗಿ ಹಲವು ಮಂದಿ ಹೋರಾಟ ನಡೆಸಿದ್ದಾರೆ.ಅಂತಹ ವ್ಯಕ್ತಿಗಳನ್ನು ಸಂಘ-ಸಂಸ್ಥೆಗಳು ಹುಡುಕಿ ಗೌರವಿಸಬೇಕಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಸಾಧಕರನ್ನು ಹುಡುಕಿ ಗೌರವಿಸುತ್ತಿರುವುದು ಸಂತಸ ಪಡುವ ವಿಚಾರವಾಗಿದೆ ಎಂದರು.
ಇದೇ ವೇಳೆ ಕನ್ನಡ ಪರ ಹೋರಾಟಗಾರ್ತಿ ಭಾರತಿ ಎಂ.ಪ್ರಕಾಶ್ ಅವರಿಗೆ “ಎಚ್.ಎಸ್.ರೇಣುಕ ಪ್ರಸಾದ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚುಟುಕು ಸಾಹಿತಿ ಡಾ.ರತ್ನಹಾಲಪ್ಪಗೌಡ, ಇಂದಿರಾ ವೆಂಕಟೇಶ್ ಮತ್ತು ಜಯಶ್ರೀ ಬ್ಯಾಕೋಡ್ ಅವರನ್ನು ಸನ್ಮಾನಿಸಲಾಯಿತು. ಚುಟುಕು ಕನ್ನಡ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.