ಬೆಂಗಳೂರು: ಕನ್ನಡ ಪುಸ್ತಕ ಓದುಗರ ಸಂಖ್ಯೆ ಏರಿಕೆಯಾದರೆ ಉತ್ಕೃಷ್ಟ ಕೃತಿಗಳು ಅಕ್ಷರ ಲೋಕಕ್ಕೆ ಬರಲು ಸಾಧ್ಯವಿದೆ ಎಂದು ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ತಿಳಿಸಿದರು. ವಿಶ್ವ ಪುಸ್ತಕ ದಿನದ ಅಂಗವಾಗಿ ಸಪ್ನ ಬುಕ್ ಹೌಸ್‌ನಿಂದ ಮಂಗಳವಾರ ಹಮ್ಮಿಕೊಳ್ಳಲಾದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೂಲಗಳಿಂದ ಪುಸ್ತಕಗಳು ಹರಿದುಬರುತ್ತಿವೆ. ಆದರೆ, ಓದುಗರ ಸಂಖ್ಯೆ ಕುಸಿಯುತ್ತಿರುವುದು ವಿಷಾದನೀಯ ಸಂಗತಿ. ಪುಸ್ತಕದ ಹೊರಗಿನ ವಿನ್ಯಾಸದ ಬಗ್ಗೆ ಚರ್ಚೆ ಮಾಡುತ್ತಾರೆ ಹೊರತು ಅದರೊಳಗೆ ಅಡಗಿರುವ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಕೇವಲ ಪುಸ್ತಕಗಳು ಸ್ಪರ್ಶಿಸಲಷ್ಟೇ ಸೀಮಿತವಲ್ಲ. ಅವುಗಳನ್ನು ತೆರೆದು ಓದಿ, ಮನ ತುಂಬಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾದಂತೆ ಪುಸ್ತಕ ಮಳಿಗೆಗಗಳು ಹೆಚ್ಚು ಹೆಚ್ಚು ತಲೆ ಎತ್ತಲಿವೆ. ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಲು ಪುಸ್ತಕಗಳಿಗೆ ಮೊರೆ ಹೋಗಬೇಕು. ಪ್ರತಿಯೊಬ್ಬರಿಗೆ ಪುಸ್ತಕಗಳಿಂದ ಅಕ್ಷರ ಜ್ಞಾನ ಮತ್ತು ಹೊಸ ಆಲೋಚನೆ ಮೂಡಲು ಸಾಧ್ಯವಿದೆ. ಓದುವಿನ ಹಸಿವು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಪುಸ್ತಕ ಓದುವವರು ದೂರವಾಗುತ್ತಿದ್ದಾರೆ. ಕಂಪ್ಯೂಟರ್ ಮತ್ತು ಆನ್‌ಲೈನ್‌ನಲ್ಲಿ ಕಳೆದು ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಇಂಥ ದಿನಗಳಲ್ಲಿ ಸಪ್ನ ಬುಕ್ ಹೌಸ್‌ನವರು ಹಲವು ಸವಾಲುಗಳ ಮಧ್ಯೆ ಪುಸ್ತಕೋದ್ಯಮವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿರುವುದು ಶಾಘ್ಲನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚುಟುಕು ಕವಿ ಎಚ್.ಡುಂಡಿರಾಜ್ ಮಾತನಾಡಿ, ಅಂದಿನ ಕಾಲದಲ್ಲಿ ನಾವೇ ಪುಸ್ತಕದ ಅಂಗಡಿಗೆ ಹೋಗಿ ಖರೀದಿಸಬೇಕಿತ್ತು. ಇಂದು ಮನೆ ಬಾಗಿಲಿಗೆ ಪುಸ್ತಕಗಳನ್ನು ಮಾರುವವರು ಬಂದರೂ ಕೊಳ್ಳುವವರಿಲ್ಲ. ನಮ್ಮ ಓದಿನಿಂದ ಬರವಣಿಗೆ ಪ್ರಬುದ್ಧವಾಗುತ್ತದೆ. ಕನ್ನಡ ಪುಸ್ತಕಗಳನ್ನು ಓದುವಂತೆ ಯುವ ಪೀಳಿಗೆಯನ್ನು ಪ್ರೇರೆಪಿಸಬೇಕು ಎಂದು ಹೇಳಿದರು.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ನಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಕಂಡುಕೊಳ್ಳಬೇಕಾದರೆ ಪುಸ್ತಕಗಳಿಗೆ ಮೊರೆ ಹೋಗಬೇಕು. ಪ್ರತಿಯೊಂದು ಪುಸ್ತಕಗಳೂ ಪ್ರಕೃತಿ, ಸಮಾನತೆ, ಸಮಾಜ, ಜೀವನ ಸಮೃದ್ಧಿಯಾಧಾರಿತ ಅಂಶಗಳಿಂದ ಕೂಡಿರುತ್ತವೆ. ಉತ್ತಮ ಬದುಕು ರೂಪಿಸಿಕೊಳ್ಳಲು ಪುಸ್ತಕಗಳು ಆಧಾರ ಎಂದು ತಿಳಿಸಿದರು.
ಡಾ.ಕೆ.ಶಿವರಾಮ ಕಾರಂತ ರಚನೆಯ ಚಾಲುಕ್ಯ ವಾಸ್ತು ಶಿಲ್ಪ, ಡಾ.ಸಿ.ಆರ್.ಚಂದ್ರಶೇಖರ್ ಅವರ ಮಹಿಳೆಯರ ಮನೋವ್ಯಾಕುಲತೆ, ಎ.ಎಸ್.ಕುಮಾರಸ್ವಾಮಿ ರಚನೆಯ ಹನಿ ನೀರಾವರಿ, ಡಾ.ಎಸ್.ಶಿವರಾಜಪ್ಪ ಅವರ ಕಲ್ಹಣನ ರಾಜ ತರಂಗಿಣಿ, ಡಾ.ಎಸ್.ಎಸ್. ಮಾಲಿನಿ ರಚನೆಯ ವೈದ್ಯಕೀಯ ವೈರುಧ್ಯಗಳು ಹಾಗೂ ಅನುವಂಶೀಯ ಕಾಯಿಲೆಗಳು ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.