ಲಕ್ಷ್ಮೇಶ್ವರ: ನಿಮ್ಮ ಜೀವನದ ಉನ್ನತಿಯ ರೂವಾರಿಗಳು ನೀವೇ ಆಗಿರುವುದರಿಂದ ವಿದ್ಯಾಭ್ಯಾಸದ ಕಾಲಾವ ಧಿಯಲ್ಲಿ ನಿರ್ದಿಷ್ಟ ಗುರಿಯತ್ತ ಗಮನ ಕೇಂದ್ರೀಕರಿಸಿ, ಶ್ರದ್ಧೆ-ನಿಷ್ಠೆಯಿಂದ ಸತತ ಅಭ್ಯಾಸ ಮಾಡಿ ವಿಷಯ ಅರ್ಥೈಸಿಕೊಂಡರೆ ವಿಷಯದ ಸಮಗ್ರ ಜ್ಞಾನ ಹೊಂದಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಹೇಳಿದರು.
ಗುರುವಾರ ಪಟ್ಟಣದ ಶ್ರೀಮತಿ ಕಮಲಾ ಹಾಗೂ ಶ್ರೀ ವೆಂಕಪ್ಪ ಎಂ. ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ತಾಂತ್ರಿಕ ಮತ್ತು ಸಾಂಸ್ಕೃತಿ ಸಮ್ಮಿಲನ ಮೇಲಾಂಜೆ-2022 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪಠ್ಯ ವಿಷಯದ ಜತೆಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕೃಷಿ ಮತ್ತು ಪ್ರಸ್ತುತ ವಿದ್ಯಮಾನಗಳ ಅರಿವಿರಬೇಕು. ಆ ಮೂಲಕ ಅವಶ್ಯಕತೆ, ಬೇಡಿಕೆಗಳಿಗೆ ತಕ್ಕಂತೆ ಹೊಸ ಸಂಶೋಧನೆ, ಆವಿಷ್ಕಾರಗಳತ್ತ ಚಿತ್ತ ಹರಿಸಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ತೀವ್ರಗತಿಯಲ್ಲಿ ಬೆಳೆಯುತ್ತಿರುವ ತಾಂತ್ರಿಕ ಕ್ಷೇತ್ರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಎಂಜಿನಿಯರಿಂಗ್ ಕ್ಷೇತ್ರದ ಮೇಲಿರುವ ವಿಶ್ವಾಸ, ನಂಬಿಕೆ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಜವಾಬ್ದಾರಿ ನಿಭಾಯಿಸಬೇಕಿದೆ. ಗ್ರಾಮೀಣ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸುವ ಶೈಕ್ಷಣಿಕ ಕಾರ್ಯ ಮಾಡುತ್ತಿರುವ ಪ್ರತಿಷ್ಠಿತ ಅಗಡಿ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದರು.
ಮಹಾವಿದ್ಯಾಲಯದ ನಿರ್ದೇಶಕ ಪ್ರೇಮಾನಂದ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಚಿಂತನೆ, ಆವಿಷ್ಕಾರಗಳ ಮೂಲಕ ತಮ್ಮಲ್ಲಿರುವ ಪ್ರತಿಭೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಉದಯಕುಮಾರ ಹಂಪಣ್ಣವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಟ್ಟು ನಂಬಿಕೆ, ಆತ್ಮವಿಶ್ವಾಸದಿಂದ ವಿದ್ಯಾಭ್ಯಾಸದಲ್ಲಿ ಮುಂದುವರೆಯಬೇಕು. ಇಲ್ಲಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕಾಲೇಜು ಮತ್ತು ಹೆತ್ತವರಿಗೆ ಕೀರ್ತಿ ತರಬೇಕು. ಆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಅಗಡಿ ಮತ್ತು ವಿವಿಧ ಕಾಲೇಜಿನ ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಂದ ಮಿನಿ ಬಾಂಡರಿ ಕ್ರಿಕೆಟ್, ರೋಡ್ಸ್ ಅಂಡ್ ಬ್ರಿಡ್ಜ್ ಮೇಕಿಂಗ್, ರೋಬೋ ರೇಸ್ 4.0, ರೋಬಬೋಟ್ ಸುಮೋ ರೆಸ್ಟಲಿಂಗ್ ಸೇವ್ ಎನರ್ಜಿ ಸೇರಿ ಅನೇಕ ಹೊಸ ಆವಿಷ್ಕಾರಗಳ ಪ್ರದರ್ಶನ, ವಿವಿಧ ವಿಷಯಗಳ ಮೇಲೆ ಪೇಪರ್ ಪ್ರಜೆಂಟೇಶನ್ ಕಾರ್ಯಕ್ರಮ ಜರುಗಿತು.
ವಿಜೇತರಿಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಉಪ ಪ್ರಾಚಾರ್ಯ ಡಾ|ಪರಶುರಾಮ ಬಾರಕಿ, ಮಿಲಾಂಜೆ-22 ಕಾರ್ಯಕ್ರಮ ಸಂಯೋಜಕರಾದ ಡಾ|ದೇವೇಂದ್ರ ಕೆ., ಹಣಕಾಸು ವಿಭಾಗದ ಮುಖ್ಯಸ್ಥ ಚನ್ನಶೇಖರಗೌಡ, ಪ್ರೊ|ಸಂತೋಷ, ಪ್ರೊ|ಅರುಣ ತಂಡಿ, ಪ್ರೊ|ರವಿಕುಮಾರ ಕೊಡದಾಳ, ಪ್ರೊ|ಸುಭಾಸ ಮೇಟಿ, ಪ್ರೊ|ಸೋಮಶೇಖರ ಕೆರಿಮನಿ, ಪ್ರೊ|ಎಸ್. ಎಫ್.ಕೊಡ್ಲಿ ಇದ್ದರು. ವಿದ್ಯಾರ್ಥಿನಿಯರಾದ ಪೂರ್ಣಿಮಾ ಸಿ., ಸಬ್ರಿàನ್, ತುಲಸಿ, ತೇಜಸ್ವಿನಿ ನಿರೂಪಿಸಿದರು.