ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಾರ್ಥನಾ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ ರಾಜ್ಯದ ಶಾಲೆಗಳಲ್ಲಿ 2020ರಿಂದಲೇ ಸಂವಿಧಾನದ ಪೀಠಿಕೆ ಓದುವ ಪರಿಪಾಠವಿದ್ದು, ಪ್ರಚಾರಕ್ಕಾಗಿ ಕಾಂಗ್ರೆಸ್ ಈಗ ಸಂವಿಧಾನವನ್ನು ದುರುಪಯೋಗಪಡಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸಂವಿಧಾನದ ಪೀಠಿಕೆಯನ್ನು ಓದುವ ನೆಪದಲ್ಲಿ ತಿರುಚಿದ ಸಂವಿಧಾನ ಪೀಠಿಕೆ ಓದಿದರೆ ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜೂ. 15ರಂದು ನಡೆದ ಸಚಿವ ಸಂಪುಟದ ತೀರ್ಮಾನದಂತೆ ಸಮಾಜ ಕಲ್ಯಾಣ ಇಲಾಖೆಯು ಜೂ. 30ರಂದು ಆದೇಶವೊಂದನ್ನು ನೀಡಿ, ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಬೇಕು ಮತ್ತು ಎಲ್ಲರೂ ಸಂವಿಧಾನದ ಪೀಠಿಕೆಗೆ ಬದ್ಧರಾಗಿರಬೇಕು. ಸಂವಿಧಾನಿಕ ತತ್ವಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಬೇಕೆಂದು ಸೂಚಿಸಿತ್ತು. ಈ ಆದೇಶವನ್ನು ಉಲ್ಲೇಖೀಸಿ ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಭಾರತದ ಸಂವಿಧಾನ ಪೀಠಿಕೆಯನ್ನು ಪ್ರತಿದಿನ ಶಾಲೆಯ ಪ್ರಾರ್ಥನೆಯ ಸಮಯದಲ್ಲಿ ಓದಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಆದರೆ 2020ರಲ್ಲಿ ತಾನು ಶಿಕ್ಷಣ ಸಚಿವನಾಗಿದ್ದಾಗಲೇ ಇಂಥದ್ದೊಂದು ಆದೇಶವನ್ನು ನೀಡಿ ಜಾರಿಗೊಳಿಸಿದ್ದೆ. ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ತೂಗಿಹಾಕುವ ನಿರ್ಧಾರವನ್ನೂ ತೆಗೆದುಕೊಂಡಿದ್ದೆವು. ನಮ್ಮಲ್ಲಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ನಾನು ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಮ್ಮ ಸರಕಾರದ ಅವಧಿಯಲ್ಲಿ ನಾವು ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದ್ದೆವು. ಪ್ರಸ್ತುತ ಕಾಂಗ್ರೆಸ್ ಸರಕಾರ ನೈಜ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಇಂತಹ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೆಳಗ್ಗೆ 10 ಗಂಟೆಗೆ ವಿಧಾನ ಸೌಧದ ಮುಂಭಾಗದಲ್ಲಿ 10 ಸಾವಿರ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿಗಳು ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಶಾಲೆಗಳು ಆನ್‌ಲೈನ್ ಮೂಲಕ ಪಾಲ್ಗೊಳ್ಳಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದೆ.