Advertisement

ಇಂದು ಮಕರ ರಾಶಿಗೆ ಶನಿ ಪ್ರವೇಶ; ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ?

10:10 AM Jan 25, 2020 | Nagendra Trasi |

ಬೆಂಗಳೂರು: ಒಂಬತ್ತು ಗ್ರಹಗಳಲ್ಲಿ ಒಂದಾಗಿರುವ ಶನಿಗ್ರಹ ಶುಕ್ರವಾರ (ಜ.24) ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿರುವ ಹನ್ನೆಲೆಯಲ್ಲಿ ಮಂಡ್ಯ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

Advertisement

ಮಧ್ಯಾಹ್ನ 12.05ಕ್ಕೆ ಮಕರ ರಾಶಿಗೆ ಶನಿ ಪ್ರವೇಶ. ಇಂದಿನಿಂದ ಮೂರು ವರ್ಷಗಳ ಕಾಲ ಮಕರರಾಶಿಯಲ್ಲೇ ಶನಿ ಸಂಚರಿಸಲಿದೆ. 2023ರ ಜನವರಿಯಲ್ಲಿ ಶನಿ ಗ್ರಹ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2017ರಲ್ಲಿ ಧನುಸ್ಸು ರಾಶಿಗೆ ಪ್ರವೇಶಿಸಿದ್ದ ಶನಿ ಗ್ರಹ.

12 ರಾಶಿಗಳನ್ನು ಸುತ್ತಲು ಶನಿ ಗ್ರಹಕ್ಕೆ 30ರಿಂದ 32 ವರ್ಷಗಳ ಕಾಲಾವಧಿ ಬೇಕಾಗಲಿದೆ. 2022ರ ಏಪ್ರಿಲ್ ನಲ್ಲಿ ಶನಿ ಗ್ರಹ ಕುಂಭರಾಶಿಗೆ ತಾತ್ಕಾಲಿಕವಾಗಿ ಪ್ರವೇಶಿಸಲಿದ್ದಾನೆ. ಇಂದು ಮಕರರಾಶಿಗೆ ಶನಿ ಗ್ರಹ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಭಕ್ತರು ಶನೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಮಕರ ರಾಶಿಗೆ ಶನಿ ಪ್ರವೇಶದಿಂದಾಗಿ ಎಲ್ಲಾ ರಾಶಿಯ ಮೇಲೂ ಪರಿಣಾಮ ಬೀರಲಿದ್ದು, 12 ರಾಶಿಗಳ ಫಲಗಳ ಮೇಲೆ ಬದಲಾವಣೆ ಉಂಟು ಮಾಡಲಿದೆ. ಅಮಾವಾಸ್ಯೆ ದಿನವಾದ ಶುಕ್ರವಾರ ಮಧ್ಯಾಹ್ನ 12.05ಕ್ಕೆ ಉತ್ತರಾಷಾಢ ನಕ್ಷತ್ರ, ಎರಡನೇ ಪಾದದಲ್ಲಿ ಧನುಸ್ಸು ರಾಶಿಯಿಂದ ಮಕರಾಶಿಗೆ ಶನಿ ಪ್ರವೇಶವಾಗಲಿದೆ.

ಧನುಸ್ಸು ರಾಶಿ ಮತ್ತು ಮಕರ ರಾಶಿಗೆ ಸಾಡೇ ಸಾತಿ ಪ್ರಭಾವದ ಜತೆಗೆ ಕುಂಭ ರಾಶಿಗೂ ಸಾಡೇ ಸಾತಿ (ಏಳೂವರೆ ವರ್ಷ) ಶನಿ ಪ್ರಭಾವ ಆರಂಭವಾಗಲಿದೆ. ಆದರೆ ವೃಶ್ಚಿಕ ರಾಶಿಗೆ ಸಾಡೇ ಸಾತಿ ಶನಿ ಪ್ರಭಾವ ಕುಗ್ಗಲಿದೆ.

Advertisement

ಮೇಷ ರಾಶಿ: ಶನಿಯು ಮಕರ ರಾಶಿಗೆ ಸಂಚರಿಸುವ ನಿಟ್ಟಿನಲ್ಲಿ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರು ಕಾಟ, ಆರೋಗ್ಯ ಸಮಸ್ಯೆ ತಲೆದೋರಲಿದೆ. ಕುಟುಂಬದಲ್ಲಿ ಮನಸ್ತಾಪ, ಆದಾಯಕ್ಕಿಂತ ಖರ್ಚು ಹೆಚ್ಚಳವಾಗಲಿದೆ. ಕೆಲವೊಮ್ಮೆ ಯಾವುದೇ ಕೆಲಸಕ್ಕೆ ಮುನ್ನುಗ್ಗುವ ಮೊದಲು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ.

ವೃಷಭ ರಾಶಿ:ಈ ರಾಶಿಯ ಒಂಬತ್ತನೇ ಮನೆಯಲ್ಲಿ ಶನಿ ಸಂಚರಿಸಲಿದ್ದು, ಅನಾವಶ್ಯಕವಾಗಿ ಅಪವಾದ ಕೇಳುವ ಪ್ರಮೇಯ ಒದಗಿ ಬರಲಿದೆ. ಮಾನಸಿಕ ನೆಮ್ಮದಿ ಕೆಡುವ ಸಾಧ್ಯತೆ ಹೆಚ್ಚು. ನಿಮ್ಮ ಆಪ್ತರು, ಬಂಧುಗಳು ನಿಮ್ಮಿಂದ ದೂರವಾಗಬಹುದು. ಹೃದಯ ಸಂಬಂಧಿ ತೊಂದರೆ ಕಾಡಬಹುದು. ವೃಷಭ ರಾಶಿಗೆ ಮಿಶ್ರ ಫಲ ಇದ್ದಿರುವುದರಿಂದ ಹಂತ, ಹಂತವಾಗಿ ಏಳಿಗೆ ಕಾಣಲಿದ್ದೀರಿ.

ಮಿಥುನ ರಾಶಿ: ಈ ರಾಶಿಯ ಎಂಟನೇ ಮನೆಯಲ್ಲಿ ವಾಸವಾಗಿದ್ದು, ಶನಿ ಪ್ರವೇಶದಿಂದಾಗಿ ನೀವು ಕೈಗೊಳ್ಳುವ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿದೆ. ಕೌಟುಂಬಿಕ ಕಲಹಕ್ಕೆ ಅವಕಾಶ ಕೊಡದಿರಿ, ಇದರಿಂದ ವೈಮನಸ್ಸು ಹೆಚ್ಚಾಗಬಹುದು. ಧನ ನಷ್ಟವಾಗಲಿದೆ. ಅಪಘಾತ ಭಯವಿದ್ದು, ಸಂಚಾರದ ವೇಳೆ ಎಚ್ಚರಿಕೆ ವಹಿಸಿ. ನಿಮ್ಮ ಸ್ನೇಹಿತವರ್ಗವೇ ನಿಮ್ಮ ವಿರುದ್ಧ ತಿರುಗಿಬೀಳಲಿದ್ದಾರೆ.

ಕಟಕರಾಶಿ: ಈ ರಾಶಿಯ ಏಳನೇ ಮನೆಗೆ ಶನಿ ಸಂಚರಿಸಲಿದ್ದು, ಅನಾವಶ್ಯಕ ತಿರುಗಾಟದಿಂದ ಖರ್ಚು, ವೆಚ್ಚಗಳು ಹೆಚ್ಚಲಿದೆ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದ್ದು, ನಿಮ್ಮ ಬದುಕಿನ ರೂವಾರಿ ನೀವೇ ಆಗಿದ್ದರಿಂದ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಿ. ಅನಾರೋಗ್ಯ ಸಮಸ್ಯೆ ಕಾಡಬಹುದು.

ಸಿಂಹರಾಶಿ: ಈ ರಾಶಿಯ ಆರನೇ ಮನೆಗೆ ಶನಿ ಪ್ರವೇಶವಾಗಲಿದ್ದು, ನಿಮಗೆ ಅಚ್ಚರಿಯ ಫಲವನ್ನು ನೀಡಲಿದ್ದಾನೆ. ಸಕಲ ಇಷ್ಟಾರ್ಥವನ್ನು ನೆರವೇರಿಸಲಿದ್ದು, ನೀವು ನಂಬಿರುವ ಮನೆ ದೇವರಿಗೆ ಪೂಜೆ ಸಲ್ಲಿಸಿ. ಆರೋಗ್ಯ, ಉದ್ಯೋಗ ಭಾಗ್ಯ ಕರುಣಿಸಲಿದ್ದು, ಹಂತ, ಹಂತವಾಗಿ ಜೀವನದಲ್ಲಿ ಅಭಿವೃದ್ಧಿ ಕಂಡು ಬರಲಿದೆ.

ಕನ್ಯಾರಾಶಿ: ಈ ರಾಶಿಯ 5ನೇ ಮನೆಗೆ ಶನಿ ಸ್ಥಾನ ಪಲ್ಲಟವಾಗಲಿದ್ದು, ಜೀವನದಲ್ಲಿ ಕಿರಿಕಿರಿ ಎದುರಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜತೆ ಘರ್ಷಣೆಗೆ ಇಳಿಯದಿರಿ. ಹಿರಿಯ ಅಧಿಕಾರಿಗಳ ಸೂಚನೆಯನ್ನು ಕಡೆಗಣಿಸದಿರಿ. ಧನ ವ್ಯಯವಾಗಲಿದೆ. ಸ್ಥಳ, ಉದ್ಯೋಗ ಬದಲಾವಣೆ ಸಾಧ್ಯತೆ ಇದ್ದು, ಅಪವಾದ ಭೀತಿ ಎದುರಿಸಲಿದ್ದೀರಿ.

ತುಲಾರಾಶಿ: ಈ ರಾಶಿಯ ನಾಲ್ಕನೆ ಮನೆಯನ್ನು ಶನಿ ಪ್ರವೇಶಿಸಲಿದ್ದು, ನಿಮಗೆ ಮಿಶ್ರಫಲ ನೀಡಲಿದ್ದಾನೆ. ಕಷ್ಟ-ಕಾರ್ಪಣ್ಯಗಳು ಕರ್ಮ ಫಲದ ಮೇಲೆ ಅನುಭವಿಸಬೇಕಾಗಲಿದೆ. ಕೋರ್ಟ್, ಕಚೇರಿ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಬಂಧು, ಬಳಗ ದೂರವಾಗುವ ಸಾಧ್ಯತೆ ಇದೆ. ಖರ್ಚು, ವೆಚ್ಚಗಳು ಅಧಿಕವಾಗಲಿದೆ. ಅನಾವಶ್ಯಕ ಹಣ ವ್ಯಯಕ್ಕೆ ಕಡಿವಾಣ ಹಾಕಿ.

ವೃಶ್ಚಿಕ ರಾಶಿ: ಈ ರಾಶಿಯ ಮೂರನೇ ಮನೆಗೆ ಶನಿ ಸಂಚಾರವಾಗಲಿದ್ದು, ನಿಮ್ಮ ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆದರೆ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರ ಜತೆ ವಾಗ್ವಾದಕ್ಕೆ ಇಳಿಯಬೇಡಿ. ಹಂತ, ಹಂತವಾಗಿ ಅಭಿವೃದ್ಧಿ ಕಾಣುವಿರಿ.

ಧನುಸ್ಸು ರಾಶಿ: ಈ ರಾಶಿಯ ಎರಡನೇ ಮನೆಗೆ ಶನಿ ಆಗಮನವಾಗಲಿದ್ದು, ಯಾರ ಮನಸ್ಸನ್ನು ನೋಯಿಸುವ ಮಾತುಗಳನ್ನಾಡಲು ಹೋಗದಿರಿ. ಕೆಲವೊಮ್ಮೆ ಮಾತಿಗಿಂತ ಮೌನವೇ ಲೇಸು. ಉದ್ಯೋಗ ಕ್ಷೇತ್ರದಲ್ಲಿ ಶನಿ ಪ್ರಭಾವದಿಂದಾಗಿ ಅಪವಾದ ಭೀತಿ ಎದುರಾಗಬಹುದು. ಯಾವುದೇ ಕೆಲಸವನ್ನು ಮುಂದೂಡಬೇಡಿ. ಶ್ರಮಕ್ಕೆ ಪ್ರತಿಫಲವಿದೆ. ಆಲಸ್ಯದಿಂದ ಬಂದ ತುತ್ತನ್ನು ಕಳೆದುಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಬೇಡಿ. ಯಾರಿಗೂ ಸಾಲ ಕೊಡುವ ಮತ್ತು ಪಡೆಯುವ ಉಸಾಬರಿಗೆ ಹೋಗದಿರುವುದು ಉತ್ತಮ.

ಮಕರರಾಶಿ: ಈ ರಾಶಿ ಜನ್ಮತಃ ಶನಿಯ ಅಧಿಪತಿಯಾಗಿದ್ದು, ಶನಿ ಪ್ರವೇಶದಿಂದ ತಂದೆ, ತಾಯಿಗೆ ಸಂಬಂಧಿಸಿದ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೋರ್ಟ್, ಕಚೇರಿ ಅಲೆದಾಟ ನಡೆಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿಯೂ ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯ ನಿರ್ವಹಿಸಿ. ನಿಮ್ಮನ್ನು ಹೊಗಳುವವರೇ ಗುಂಡಿಗೆ ಇಳಿಸುವ ಹುನ್ನಾರ ಇರುವವರ ಬಗ್ಗೆ ಎಚ್ಚರವಿರಲಿ. ಶ್ರಮಕ್ಕೆ ತಕ್ಕ ಪ್ರತಿಫಲ ಇದೆ. ಕುಟುಂಬದಲ್ಲಿ ಸಹೋದರ, ಸಹೋದರಿಯರ ಜತೆ ವಾಗ್ವಾದ ಬೇಡ. ಆರೋಗ್ಯದ ಬಗ್ಗೆ ಸದಾ ಎಚ್ಚರ ಇರಲಿ. ತಂದೆ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ.

ಕುಂಭರಾಶಿ: ಈ ರಾಶಿಯ 12ನೇ ಮನೆಯಲ್ಲಿ ಶನಿ ಪ್ರವೇಶಿಸಲಿದ್ದು, ಕುಟುಂಬದಲ್ಲಿ ನೆಮ್ಮದಿ ಇರಬೇಕಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ. ಶನಿ ಪ್ರಭಾವದಿಂದ ಎಲ್ಲಾ ಕೆಲಸ, ಕಾರ್ಯಗಳು ಅರ್ಧಕ್ಕೆ ನಿಲ್ಲಲಿದೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ ಸಾಧ್ಯತೆ, ಉದ್ಯೋಗ ಹುಡುಕುತ್ತಿರುವವರಿಗೆ ಮತ್ತಷ್ಟು ಅಡ್ಡಿ ಆತಂಕ ಮುಂದುವರಿಯಲಿದೆ. ನಿಮ್ಮದು ಹೇಳಿಕೊಳ್ಳಲು ದೊಡ್ಡ ಹುದ್ದೆ, ಆದರೆ ಬದುಕುವುದೇ ದುಸ್ತರ ಎಂಬ ಸ್ಥಿತಿ. ಹಂತ, ಹಂತವಾಗಿ ಅಭಿವೃದ್ಧಿ ಕಾಣುವಿರಿ.

ಮೀನರಾಶಿ: ಈ ರಾಶಿಯ ಹನ್ನೊಂದನೆ ಮನೆಗೆ ಶನಿ ಪ್ರವೇಶವಾಗಲಿದ್ದು ನಿಮಗೆ ಉತ್ತಮ ಫಲವನ್ನು ಕರುಣಿಸಲಿದ್ದಾನೆ. ಈವರೆಗೂ ಮಿಶ್ರಫಲ ಅನುಭವಿಸುತ್ತಿದ್ದ ನೀವು ಇನ್ಮುಂದೆ ದೇವರ ಅನುಗ್ರಹದಿಂದ ಕೈಹಾಕಿದ ಕಾರ್ಯಗಳು ಕೈಗೂಡಲಿದೆ. ದಾಯಾದಿ ಕಲಹ ಕಂಡುಬರಲಿದೆ. ಧೈರ್ಯಗೆಡದೆ ಸಂಸಾರ ಮುನ್ನಡೆಸಿ. ಪತಿ, ಪತ್ನಿ ನಡುವೆ ಭಿನ್ನಾಭಿಪ್ರಾಯ ತಲೆದೋರದಂತೆ ಎಚ್ಚರಿಕೆ ವಹಿಸಿ.

Advertisement

Udayavani is now on Telegram. Click here to join our channel and stay updated with the latest news.

Next