ದಾವಣಗೆರೆ: ಪ್ರತಿಯೊಬ್ಬರು ಉತ್ತಮ ಪುಸ್ತಕ ಓದುವ ಮೂಲಕ ಮಸ್ತಕವನ್ನು ಭರ್ತಿ ಮಾಡಿಕೊಂಡು ಸಾರ್ಥಕ ಜೀವನ ಸಾಗಿಸಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. ಭಾನುವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಬಯಲು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬದುಕಿಗೆ ಪ್ರೇರಣೆ, ಸ್ಫೂರ್ತಿ ನೀಡುವಂಥಹ ಪುಸ್ತಕ, ಗ್ರಂಥಗಳನ್ನು ಓದುವ ಮೂಲಕ ತಲೆ ಎಂಬ ಗ್ರಂಥಿಯನ್ನು ತುಂಬಿಸಿಕೊಳ್ಳಬೇಕು.
ಗ್ರಂಥಾಧ್ಯಯನದ ಮುಖೇನ ಸುಧಾರಣೆ, ಜಾಗೃತಿಗೆ ಒಳಗಾಗಬೇಕು.ಜಗತ್ತನ್ನು ಒಳ್ಳೆಯದರ ಕಡೆಗೆ ಕೊಂಡೊಯ್ಯುವಂಥಹ ಶಕ್ತಿ ಪುಸ್ತಕಕ್ಕೆ ಇದೆ ಎಂದರು. ಪುಸ್ತಕ ಓದುವುದು ಅತ್ಯಂತ ವಿಧಾಯಕ, ಪ್ರೇರಣೆ, ಸ್ಫೂರ್ತಿ ನೀಡುವಂಥಹ ಉತ್ತಮೋತ್ತಮ ಹವ್ಯಾಸ. ಎಲ್ಲರೂ ಜೀವನ ಎಂದರೆ ಸದಾ ಸುಖದ ಸುಪ್ಪತ್ತಿಗೆ ಎಂದೇ ಭಾವಿಸುತ್ತಾರೆ. ಜೀವನದಲ್ಲಿ ಸುಖ ಎನ್ನುವುದು ಪಾರ್ಟ್ ಟೈಮ್. ಕಷ್ಟ- ನಷ್ಟಗಳೇ ಪುಲ್ ಟೈಮ್. ಸುಖ-ದುಖದ ಮೂಲಕ ಜೀವನದ ಅನುಭವ ದಕ್ಕುತ್ತದೆ.
ನಮ್ಮೆಲ್ಲರ ಜೀವನದ ಅನಾವರಣಕ್ಕೆ ಓದುವ ಹವ್ಯಾಸ ಅತೀ ಮುಖ್ಯ. ಹಾಗಾಗಿ ಎಲ್ಲರೂ ಓದುವ ಪ್ರಕ್ರಿಯೆಗೆ ಒಳಗಾಗಬೇಕು ಎಂದು ತಿಳಿಸಿದರು. ನಾವೆಲ್ಲರೂ ಬಯಲು ರಂಗಮಂದಿರ, ಶೌಚಾಲಯದ ಬಗ್ಗೆ ಕೇಳಿರುತ್ತೇವೆ. ಅಂಥದ್ದರಲ್ಲಿ ಬಯಲು ಗ್ರಂಥಾಲಯ ಎಂಬುದು ವಿಶೇಷ ಚಿಂತನೆ ಮತ್ತು ಪರಿಕಲ್ಪನೆ. ಹಚ್ಚ ಹಸಿರಿನ ವಾತಾವರಣದ ನಡುವೆ ತಮಗೆ ಇಷ್ಟವಾದ ಪುಸ್ತಕ, ಗ್ರಂಥ, ದಿನ, ವಾರಪತ್ರಿಕೆ ಓದಿ, ಅನೇಕ ವಿಷಯಗಳನ್ನು ತಿಳಿದುಕೊಳ್ಳುವಂಥದ್ದು ತುಂಬಾ ಒಳ್ಳೆಯದು.
ದಾವಣಗೆರೆ ಜನರು ಈ ಬಯಲು ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅನೇಕರು ಸಂಜೆ ವೇಳೆಯನ್ನು ಎಲ್ಲೆಲಿಯೋ ಕಳೆಯುತ್ತಾರೆ. ಕ್ಲಬ್, ಪಬ್ ಎಂದು ಗಬ್ಟಾಗುತ್ತಾರೆ. ಮನೆಗೆ ಬರುವ ಅವರನ್ನು ಸುಗಂಧದ್ರವ್ಯ ಹಾಕಿಯೇ ಒಳಕ್ಕೆ ಕರೆದುಕೊಳ್ಳಬೇಕಾದ ಸ್ಥಿತಿಯಲ್ಲಿರುತ್ತಾರೆ. ಅಥಂದ್ದರ ಬದಲಿಗೆ ಸಂಜೆಯ ಸಮಯವನ್ನು ಒಳ್ಳೆಯ ಪುಸ್ತಕ ಓದುವ ಮೂಲಕ ಕಳೆಯುವಂತಾಗಬೇಕು.
ಅತ್ಯಮೂಲ್ಯ ಸಮಯವನ್ನು ಆ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈಗಿನ ವಾತಾವರಣದಲ್ಲಿ ಟಿವಿ, ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಬೇಡವಾದುದ್ದನ್ನು ನೋಡುವುದೇ ಹೆಚ್ಚಾಗಿದೆ. ಪುಸ್ತಕ, ಗ್ರಂಥ ಓದುವ ಮೂಲಕ ತಿಳಿಯುವುದು, ತಿಳಿಯಧಿ ಪಡಿಸುವುದಕ್ಕಿಂತಲೂ ನೋಡಬಾರದೇ ಇರುವುದನ್ನು ನೋಡುವಂಥದ್ದು ಹೆಚ್ಚಾದ ಪರಿಣಾಮ ಬದುಕು ಎಂಬುದೇ ರಣರಂಗವಾಗುತ್ತಿದೆ.
ಜಗತ್ತು ಕೆಟ್ಟದ್ದರ ಕಡೆ ವೇಗವಾಗಿ ಸಾಗುತ್ತಿದೆ. ಜೀವನವನ್ನು ಹಸನು ಮಾಡಿಕೊಳ್ಳಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಎಂ. ಜಯಕುಮಾರ್, ಡಾ| ಜಿ.ಸಿ. ಬಸವರಾಜ್, ಪಲ್ಲಾಗಟ್ಟೆ ಕೊಟ್ರೇಶಪ್ಪ ಇತರರು ಇದ್ದರು. ಪತ್ರಕರ್ತ ಸುಭಾಷ್ ಬಣಕಾರ್ ಪ್ರಾಸ್ತಾವಿಕ ಮಾತುಗಳಾಡಿದರು. ಎಂ.ಕೆ. ಬಕ್ಕಪ್ಪ ನಿರೂಪಿಸಿದರು.